ತಹಶೀಲ್ದಾರ್ ಹತ್ಯೆ: ಸಂತಾಪ ವ್ಯಕ್ತಪಡಿಸಿದ ಸಿಎಂ ಬಿಎಸ್‌ವೈ; 25 ಲಕ್ಷ ರೂ. ಪರಿಹಾರ ಘೋಷಣೆ

Update: 2020-07-09 13:56 GMT

ಕೋಲಾರ, ಜು.9: ಬಂಗಾರಪೇಟೆಯ ತಹಶೀಲ್ದಾರ್ ರನ್ನು ಇರಿದು ಕೊಂದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ತಹಶೀಲ್ದಾರ್ ರನ್ನು ರನ್ನು ಚಾಕುವಿನಿಂದ ಇರಿದು ಸಾಯಿಸಿರುವುದು ಅತ್ಯಂತ ವಿಷಾದನೀಯ ಎಂದು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಬಂಗಾರಪೇಟೆ ತಾಲುಕಿನ ಕಳವಂಚಿ ಗ್ರಾಮದ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರರಾದ ಚಂದ್ರಮೌಳೇಶ್ವರ್ ಅವರು ಸರ್ವೇ ಕಾರ್ಯಕ್ಕೆ ಹೋದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರನ್ನು ಚಾಕುವಿನಿಂದ ಇರಿದು ಸಾಯಿಸಿರುವುದು ಅತ್ಯಂತ ವಿಷಾದನೀಯ. ದೇವರು, ಚಂದ್ರಮೌಳೇಶ್ವರ್ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಆದ ಹಾನಿ ಮತ್ತು ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ" ಎಂದು ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲು ಸೂಚಿಸಲಾಗಿದೆ. ಆರೋಪಿಗಳ ಮೇಲೆ ಕಾನೂನು ಅಡಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News