ಕೆಪಿಎಸ್ಸಿಗೆ ನಿದೇರ್ಶನ ನೀಡಲು ಕೋರಿ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ

Update: 2020-07-09 15:18 GMT

ಬೆಂಗಳೂರು, ಜು.9: ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು 2015ರ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯಲ್ಲಿ 428 ಗೆಜೆಟೆಡ್ ಹುದ್ದೆಗಳನ್ನು ತುಂಬಲು 2017ರ ಜೂನ್‍ನಲ್ಲಿ ಅರ್ಜಿ ಅಹ್ವಾನಿಸಿ, ಆಗಸ್ಟ್ ನಲ್ಲಿ ಪ್ರಾಥಮಿಕ ಪರೀಕ್ಷೆ, ಡಿಸೆಂಬರ್ ನಲ್ಲಿ ಮುಖ್ಯ ಪರೀಕ್ಷೆ, 2019ರಲ್ಲಿ ಸಂದರ್ಶನ ನಡೆಸಿ, 2020ರ ಜನವರಿಯಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಈ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಆಗದೆ ಇರುವ ಅಭ್ಯರ್ಥಿಗಳು ಕೆಪಿಎಸ್ಸಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅಭ್ಯರ್ಥಿಗಳು ಬರೆದ ಅವರದೇ ಆದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಅವರು ಪ್ರತಿ ಪ್ರಶ್ನೆಗೆ ಗಳಿಸಿದ ಅಂಕಗಳೊಂದಿಗೆ ಕೊಡಲು ಕೋರಿದಾಗ, ಉತ್ತರ ಪತ್ರಿಕೆಗಳ ಪ್ರತಿಗಳನ್ನು ಕೊಡಲು ನಿರಾಕರಿಸಿ, ಅಭ್ಯರ್ಥಿಗಳಿಗೆ ಹಿಂಬರಹಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯುಪಿಎಸ್ಸಿ/ಅಂಗೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ ಉತ್ತರ ಪತ್ರಿಕೆಗಳ ಪ್ರತಿಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಆದರೆ, ಆ ತೀರ್ಪು 2010ರಲ್ಲಿ ಯುಪಿಎಸ್ಸಿ ನಡೆಸಿದ ಪ್ರಾಥಮಿಕ(ಪ್ರಿಲಿಮನರಿ) ಪರೀಕ್ಷೆಗೆ ಸಂಬಂಧಿಸಿದೆ. ಕೆಪಿಎಸ್ಸಿ ಉತ್ತರ ಪತ್ರಿಕೆಗಳನ್ನು ಕೊಡಬಾರದು ಎಂದು ತೀರ್ಪಿನಲ್ಲಿ ಹೇಳಿಲ್ಲ ಎಂದು ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ.

ಈ ತೀರ್ಪಿನ ನಂತರ ಸುಪ್ರೀಂಕೋರ್ಟ್ ಮೃದಲ್ ಮಿಶ್ರಾ/ಉತ್ತರಪ್ರದೇಶ ಲೋಕಸೇವಾ ಆಯೋಗದ ಆಧ್ಯಕ್ಷರ ಪ್ರಕರಣದಲ್ಲಿ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡಲು ಅವಕಾಶ ಮಾಡಲಾಗಿದೆ. ಅಲ್ಲದೆ, ಮಾಹಿತಿ ಹಕ್ಕು ಆಯುಕ್ತರು ಸಹ ಮಾಹಿತಿ ಕೊಡಲು ಆದೇಶ ನೀಡಿದ್ದಾರೆ. ಆದರೂ, ಕೆಪಿಎಸ್ಸಿ ಅಭ್ಯರ್ಥಿಗಳಿಗೆ ತೊಂದರೆ ಕೊಟ್ಟು ವೃಥಾ ನ್ಯಾಯಾಲಯಗಳಿಗೆ ಅಲೆದಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್ಸಿ ಈ ನಡೆಸಿದ ಎಲ್ಲ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಯ 2008, 2010, 2011 ಮತ್ತು 2014ರ ಸಾಲುಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರಶ್ನೆವಾರು ಗಳಿಸಿದ ಅಂಕಗಳನ್ನು ಮಾಹಿತಿ ಹಕ್ಕಿನಡಿ ಅಭ್ಯರ್ಥಿಗಳಿಗೆ ಕೊಡಲಾಗಿದೆ. ಈ ಬಾರಿ ಮಾತ್ರ ನಿರಾಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದುದರಿಂದ, ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಕೆಪಿಎಸ್ಸಿಗೆ ಸೂಚನೆ ನೀಡಿ, ಅಭ್ಯರ್ಥಿಗಳು ಕೋರಿರುವ ಅವರ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಅವರು ಗಳಿಸಿದ ಪ್ರಶ್ನೆವಾರು ಅಂಕಗಳ ಸಮೇತ ನೀಡಲು ಮತ್ತು ಮಾಹಿತಿ ಆಯೋಗದ ಆಯುಕ್ತರು ಕೆಪಿಎಸ್ಸಿಯಲ್ಲಿ ಮಾಹಿತಿ ಹಕ್ಕಿನ ಕಾಯ್ದೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆದೇಶ ನೀಡುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News