ಸರಕಾರದ ಲೋಪಗಳ ಬಗ್ಗೆ ಚರ್ಚೆ ಬೇಡ, ಜನರ ಜೀವ ಕಾಪಾಡಲು ಪ್ರಯತ್ನಿಸೋಣ: ಕುಮಾರಸ್ವಾಮಿ

Update: 2020-07-09 15:48 GMT

ಬೆಂಗಳೂರು, ಜು.9: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವಾರು ಸಚಿವರು ಮಾಧ್ಯಮಗಳ ಮೂಲಕ ಜನತೆಗೆ ತಿಳಿಸಿರುವ ಹಲವಾರು ತೀರ್ಮಾನಗಳನ್ನು ಗಮನಿಸಿದಾಗ ಸರಕಾರ ಕೇವಲ ಮಾತುಗಳಿಗೆ ಸೀಮಿತವಾಗಿದೆ ಏನೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸರಕಾರಕ್ಕೆ ವಿಡಿಯೋ ಸಂದೇಶವನ್ನು ಕಳುಹಿಸಿರುವ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಸರಕಾರ ಈಗಾಗಲೆ ಕೋವಿಡ್ ಕಾರ್ಯದಲ್ಲಿ ರಾಜ್ಯದ ಜನತೆಯ ಹಣ ಲೂಟಿ ಮಾಡಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾನು ವಿರೋಧ ಪಕ್ಷದ ನಾಯಕರಿಗೂ ಮನವಿ ಮಾಡುತ್ತೇನೆ, ಈ ಹಂತದಲ್ಲಿ ನಾವು ಸರಕಾರದ ಲೋಪಗಳ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಹೆಚ್ಚಾಗಿ, ಜನರ ಜೀವ ಕಾಪಾಡಲು ಪ್ರಯತ್ನಿಸೋಣ ಎಂದು ಮನವಿ ಮಾಡಿದ್ದಾರೆ.

ಸರಕಾರ ಈವರೆಗೆ ಮಾಡಿರುವ ಹುಡುಗಾಟಿಕೆಯ ತೀರ್ಮಾನಗಳು, ಲೋಪದೋಷಗಳ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಸರಿಪಡಿಸಿಕೊಂಡು ಜನರ ರಕ್ಷಣೆ ಮಾಡಲು ಮುಂದಾಗಲಿ. ಕೋವಿಡ್ ವಿಷಯದಲ್ಲಿ ಸರಕಾರದ ಹಣ ದುರುಪಯೋಗವಾಗುತ್ತಿದೆ ಎಂಬ ಆಪಾದನೆಗಳು ಪುನಃ ಬರದಂತೆ ಮುಖ್ಯಮಂತ್ರಿ, ವಿರೋಧ ಪಕ್ಷದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರಕಾರ ರಚಿಸಿರುವ ಟಾಸ್ಕ್‍ಫೋರ್ಸ್ ಗಳಲ್ಲಿ ಅವರನ್ನು ಸದಸ್ಯರನ್ನಾಗಿ ಮಾಡಲಿ ಎಂದು ಅವರು ಸಲಹೆ ನೀಡಿದ್ದಾರೆ.

ನಮ್ಮ ಪಕ್ಷದವರು ಯಾರೂ ಸರಕಾರದ ಮೇಲೆ ಈ ಹಂತದಲ್ಲಿ ಆಪಾದನೆಗಳನ್ನು ಮಾಡಲ್ಲ. ನಮಗೆ ಜನತೆಯ ಜೀವ ಮುಖ್ಯ. ಸರಕಾರದಿಂದ ಈ ಕೋವಿಡ್ ಕಾರ್ಯಕ್ಕೆ ಮಾಡುವ ವೆಚ್ಚ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲಿ. ಎಂಟು ವಲಯಗಳಿಗೆ ಎಂಟು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ, ಈ ಸಚಿವರ ಜವಾಬ್ದಾರಿ ಏನು ಎಂಬುದು ಗೊತ್ತಾಗುತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸರಕಾರ ಖಾಸಗಿ ಆಸ್ಪತ್ರೆಯ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕು. ಬೆದರಿಕೆಗಳನ್ನು ಹಾಕಿ ಯಾವ ಸಹಕಾರವನ್ನು ಪಡೆಯಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳಿಗೂ ವಿಮೆ ಯೋಜನೆ ವಿಸ್ತರಣೆ ಮಾಡುವುದು ಉತ್ತಮ. ಬಿಐಇಸಿಯಲ್ಲಿ 10 ಸಾವಿರ ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಸರಕಾರ ಹೇಳಿದೆ. ಇದಕ್ಕಾಗಿ ಪ್ರತಿದಿನ 80 ಲಕ್ಷ ರೂ.ಬಾಡಿಗೆ ಪಾವತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

10 ಸಾವಿರ ಹಾಸಿಗೆಗಳ ಸಾಮರ್ಥ್ಯದ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ನರ್ಸ್ ಗಳನ್ನು ಎಲ್ಲಿಂದ ತರುತ್ತೀರಾ? ಹುಡುಗಾಟಿಕೆಯ ಕೆಲಸಗಳನ್ನು ಮಾಡಲು ಹೋಗಬೇಡಿ. ವೈದ್ಯಕೀಯ, ಪಿಜಿ ಓದಿರುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ಬಳಸಿಕೊಂಡು ಅವರಿಗೆ ಅಗತ್ಯ ಭತ್ತೆ ಹಾಗೂ ಪ್ರೋತ್ಸಾಹ ನೀಡಿ ಎಂದು ಕುಮಾರಸ್ವಾಮಿ ಕೋರಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೂ ಆರ್ಥಿಕ ನೆರವು ನೀಡಲು ಪ್ರೋತ್ಸಾಹ ನೀಡಿ, ಅವರ ಸೇವೆಯನ್ನು ಪಡೆದುಕೊಳ್ಳಬೇಕು. ಆಪಾದನೆಗಳು, ವೈಫಲ್ಯಗಳ ಬಗ್ಗೆ ಈಗ ಚರ್ಚೆ ನಡೆಸುವುದು ಅನಾವಶ್ಯಕ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡೋಣ. ಈಗ ಜನರ ಜೀವನ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಅಂತರ್ ಜಿಲ್ಲಾ ವಾಹನಗಳ ಸಂಚಾರ ರದ್ದು ಪಡಿಸುವುದಕ್ಕೆ ಸಂಬಂಧಿಸಿದಂತೆ ತಜ್ಞರು ನೀಡಿರುವ ವರದಿ ಅನ್ವಯ, ಸರಕಾರದ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗದಂತೆ, ಜನರ ಜೀವನದ ಜೊತೆ ಚೆಲ್ಲಾಟವಾಡದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಮಂತ್ರಿಗಳಿಗೆ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲ ಎಂದು ಕುಮಾರಸ್ವಾಮಿ ದೂರಿದ್ದಾರೆ.

ಕೋವಿಡ್ ಪರೀಕ್ಷೆಗೆ ಬರುವ ರೋಗಿಗಳಿಗೆ ಒಂದು ವಾರವಾದರೂ ಪರೀಕ್ಷೆಯ ವರದಿ(ಟೆಸ್ಟ್ ರಿಪೋರ್ಟ್) ನೀಡಲಾಗುತ್ತಿಲ್ಲ. ಇದರಿಂದ, ಸೋಂಕಿತರಿಂದ ಮತ್ತಷ್ಟು ಮಂದಿಗೆ ಸೋಂಕು ಹರಡುವ ಅಪಾಯವಿರುತ್ತದೆ. ಬೆಳಗ್ಗೆ ಪರೀಕ್ಷೆಗೊಳಪಟ್ಟರೆ, ಸಂಜೆ ವೇಳೆ ವರದಿ ಬರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಕೋವಿಡ್ ಪರೀಕ್ಷೆಯನ್ನು ಸರಕಾರ ಉಚಿತ ಮಾಡಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News