ರಾಜ್ಯಕ್ಕೆ ವಿದೇಶಿ ಹೂಡಿಕೆದಾರರ ಆಕರ್ಷಣೆಗೆ ಅಂತರ್ ರಾಷ್ಟ್ರೀಯ ಏಜೆನ್ಸಿ ನೇಮಕ: ಸಚಿವ ಸಂಪುಟ ಒಪ್ಪಿಗೆ

Update: 2020-07-09 17:22 GMT

ಬೆಂಗಳೂರು, ಜು. 9: ಕರ್ನಾಟಕ ರಾಜ್ಯಕ್ಕೆ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಣೆ ಮಾಡಲು ರಾಜ್ಯ ಸರಕಾರ, ಅಂತರ್ ರಾಷ್ಟ್ರೀಯ ಮಟ್ಟದ ಖಾಸಗಿ ಏಜೆನ್ಸಿಯೊಂದನ್ನು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಬಂಡವಾಳ ಆಕರ್ಷಣೆಗೆ `ಬೋಸ್ಟನ್ ಕನ್ಸಲ್ಟೆಂಟ್ ಗ್ರೂಪ್ ಆಫ್ ಇಂಡಿಯಾ ಪ್ರೈ.ಲಿ ಕಂಪೆನಿ'ಗೆ ಸಮಲೋಚಕರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದ್ದು, ಒಂದು ವರ್ಷದ ಅವಧಿಗೆ ವೃತ್ತಿಪರ ಶುಲ್ಕ 12 ಕೋಟಿ ರೂ.ನಿಗದಿ ಮಾಡಲಾಗಿದೆ. ಈ ಕಂಪೆನಿ ಹೂಡಿಕೆದಾರರನ್ನು ಕರ್ನಾಟಕಕ್ಕೆ ಕರೆತಂದು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿಸಲಿದೆ ಎಂದು ತಿಳಿಸಿದರು.

ಇ-ಆಡಳಿತಕ್ಕೆ ಒಪ್ಪಿಗೆ: ಖಾಸಗಿ ಸಹಭಾಗಿತ್ವದಲ್ಲಿ ಇಎಟಿ ಸರ್ವಿಸಸ್ ಎಂಬ ಕಂಪೆನಿ ಮೂಲಕ `ಇ ಆಡಳಿತ ಮತ್ತು ಇ ಸಂಗ್ರಹಣೆ- 2.0' ಎಂಬ ಹೊಸ ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಅನುಷ್ಟಾನಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಏಳು ವರ್ಷಗಳ ಅವಧಿಗೆ ಒಟ್ಟು 184.37 ಕೋಟಿ ರೂ.ವೆಚ್ಚವಾಗಲಿದ್ದು, ಆರ್ಥಿಕ ಇಲಾಖೆ ಸಲಹೆಯನ್ನಾಧರಿಸಿ ಈ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದರು.

ವಿದ್ಯುತ್ ಕಂಪೆನಿಗಳಿಗೆ ಬಡ್ಡಿ ರಹಿತ ಸಾಲ: ರಾಜ್ಯದ ವಿದ್ಯುತ್ ಪೂರೈಕೆ ಕಂಪೆನಿಗಳು ವಿವಿಧ ಮೂಲಗಳಿಂದ ಸಾಲ ಪಡೆದಿದ್ದು, ಸಾಲವನ್ನು ಸಕಾಲದಲ್ಲಿ ಪಾವತಿಸಲಾಗದಿದ್ದರೆ ಎನ್‍ಪಿಎ ಆಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಐದು ವಿದ್ಯುತ್ ಕಂಪೆನಿಗಳಿಗೆ ಒಟ್ಟು 2,500 ಕೋಟಿ ರೂ.ಬಡ್ಡಿ ರಹಿತ ಸಾಲ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಬೆಸ್ಕಾಂಗೆ-500 ಕೋಟಿ ರೂ., ಹುಬ್ಬಳ್ಳಿ-ಧಾರವಾಡ ವಿದ್ಯುತ್ ಕಂಪೆನಿಗೆ 400 ಕೋಟಿ ರೂ., ಕಲಬುರಗಿ ವಿದ್ಯುತ್ ಕಂಪನಿಗೆ 1 ಸಾವಿರ ಕೋಟಿ ರೂ., ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಗೆ- 600 ಕೋಟಿ ರೂ.ಸಾಲ ನೀಡಲು ನಿರ್ಧರಿಸಲಾಗಿದೆ ಎಂದ ಅವರು, ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ) ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಇಂಧನ ಇಲಾಖೆ ವ್ಯಾಪ್ತಿಗೆ ಹಸ್ತಾಂತರಿಸಲು ಸಂಪುಟ ಸಮ್ಮತಿಸಿದೆ ಎಂದು ತಿಳಿಸಿದರು.

ಸೆಸ್ ಇಳಿಕೆ: ಎಪಿಎಂಸಿ ಮಾರುಕಟ್ಟೆ ಶುಲ್ಕವೆಂದು ಶೇ.1.5ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದ್ದು, ಅದನ್ನು ಶೇ.1ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಕೆಪಿಎಸ್‍ಸಿಯ ತೆರವಾದ ಒಂದು ಹುದ್ದೆಗೆ ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ಗೆ ತಿದ್ದುಪಡಿ ಮಾಡಿದ್ದು, ಲೋಕಾಯುಕ್ತ ಅಥವಾ ಉಪಲೋಕಾಯುಕ್ತ 90 ದಿನದಲ್ಲಿ ತನಿಖೆ ಪೂರ್ಣಗೊಳಿಸಿ ಆರು ತಿಂಗಳ ಒಳಗೆ ಆರೋಪಪಟ್ಟಿ ಸಿದ್ಧಪಡಿಸಬೇಕು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪಿಠೋಪಕರಣ ಖರೀದಿಸಲು 12 ಕೋಟಿ ರೂ., ರಾಯಚೂರಲ್ಲಿ ಐಐಐಟಿ ಸ್ಥಾಪನೆಗೆ ಕೇಂದ್ರದ ಜತೆ ಒಡಂಬಡಿಕೆಯಾಗಿತು. ಅದರನ್ವಯ ನಾಲ್ಕು ವರ್ಷಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು 44 ಕೋಟಿ ರೂ. ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಇದೆ ಸಂದರ್ಭದಲ್ಲಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News