ಗೌರವಧನ ಹೆಚ್ಚಳಕ್ಕೆ ಒತ್ತಾಯ: ಜುಲೈ10 ರಿಂದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟ

Update: 2020-07-09 17:31 GMT

ಬೆಂಗಳೂರು, ಜು.9: ಮಾಸಿಕ ಹನ್ನೆರಡು ಸಾವಿರ ರೂ.ಗೌರವ ಧನ ನಿಗದಿಪಡಿಸುವುದು ಹಾಗೂ ಕೋವಿಡ್-19 ಸಂಬಂಧ ಸುರಕ್ಷಿತ ಪರಿಕರಗಳಿಗೆ ಒತ್ತಾಯಿಸಿ ಇಂದಿನಿಂದ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು, ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಬೆಂಬಲ ಘೋಷಿಸುತ್ತಿದ್ದಾರೆ. ಇದರಿಂದ ಕೋವಿಡ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಸೇವೆಗಳು ಜನರಿಗೆ ತಲುಪುವಲ್ಲಿ ಏರುಪೇರಾಗಲಿವೆ ಎಂಬ ಆತಂಕ ವ್ಯಕ್ತವಾಗಿದೆ.

ಕೋವಿಡ್-19 ನಿಯಂತ್ರಣ ಸಂಬಂಧ ಆಶಾ ಕಾರ್ಯಕರ್ತೆಯರು ವೈದ್ಯಕೀಯ ಇಲಾಖೆ ಹಾಗೂ ಜನರ ನಡುವೆ ಸೇತುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಆಗಿಂದಾಗಿ ಜಾರಿ ಮಾಡುವ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅವಶ್ಯಕವಾಗಿದೆ. ಈ ನಡುವೆ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ತಮ್ಮ ಸೇವೆಯನ್ನ ಸ್ಥಗಿತಗೊಳಿಸಿ ಹೋರಾಟ ಮಾಡುವುದರಿಂದ ಸಾರ್ವಜನಿಕ ವಲಯದಲ್ಲಿ ಸಮಸ್ಯೆಗಳು ತಲೆದೂರಲಿವೆ ಎಂಬ ಆತಂಕ ವ್ಯಕ್ತವಾಗಿದೆ. 

ಸರಕಾರ ಸ್ಪಂದಿಸಿಲ್ಲ, ಹೋರಾಟ ಅನಿವಾರ್ಯ

ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಜನವರಿಯಿಂದ ಸುಮಾರು 10 ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಚರ್ಚಿಸಲು ಒಂದು ಸಭೆ ನಡೆಸುವ ಪ್ರಸ್ತಾಪವನ್ನು ಸರಕಾರ ಮುಂದಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ

-ಡಿ.ನಾಗಲಕ್ಷ್ಮಿ, ರಾಜ್ಯ ಕಾರ್ಯದರ್ಶಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News