ಮಂಡ್ಯ: ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ ಮಾಜಿ ಶಾಸಕ; ವಿಡಿಯೊ ವೈರಲ್

Update: 2020-07-09 17:43 GMT

ಮಂಡ್ಯ, ಜು.9: ರಸ್ತೆ ಅಗಲೀಕರಣಕ ಕಾಮಗಾರಿಗೆ ಬಸ್ ನಿಲ್ದಾಣ ತೆರವು ಮಾಡುತ್ತಿದ್ದ ಜೆಸಿಬಿ ಚಾಲಕನ ಮೇಲೆ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ. 

ಕಲ್ಲು ತೂರಾಟ ಮಾಡಿದ್ದರಿಂದ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಇದ್ದರೂ ಚಾಲಕನ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟ ನಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ.

ಅರಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನುಮತಿ ಪಡೆದು ಪಿಡಬ್ಲ್ಯೂಡಿ ಸಿಬ್ಬಂದಿ ಬಸ್ ಸ್ಟ್ಯಾಂಡ್ ತೆರವು ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅರಕೆರೆ ಗ್ರಾಮದವರೇ ಆಗಿದ್ದು, ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಲಿ ಕಾರ್ಮಿಕನ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News