ಸಾರಿಗೆ ನೌಕರರಿಗೆ ವೇತನ, ಭತ್ಯೆ ರಹಿತ ವಿಶೇಷ ರಜೆ: ಕೆಎಸ್ಸಾರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ವಿರೋಧ

Update: 2020-07-09 17:58 GMT

ಬೆಂಗಳೂರು, ಜು.9: ಕೆಎಸ್ಸಾರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಒಂದು ವರ್ಷದ ಅವಧಿಗೆ ವೇತನ ಹಾಗೂ ಭತ್ಯೆ ರಹಿತ ವಿಶೇಷ ರಜೆಯನ್ನು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಫೆಡರೇಷನ್, ಕೆಎಸ್ಸಾರ್ಟಿಸಿ ಅಡಳಿತ ಮಂಡಳಿಯು ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ತನ್ನ ಸಂಸ್ಥೆಯ ಸಿಬ್ಬಂದಿಗಳ ಹಿತ ಕಾಯುವುದನ್ನು ಬಿಟ್ಟು, ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಹ ಆದೇಶಗಳನ್ನು ಜಾರಿ ಮಾಡುತ್ತಿರುವುದು ಸರಿಯಲ್ಲವೆಂದು ಅಕ್ಷೇಪ ವ್ಯಕ್ತಪಡಿಸಿದೆ.

ಒಂದು ವರ್ಷದವರೆಗೆ ವೇತನ ರಹಿತ ರಜೆ ಕೊಟ್ಟರೆ, ನೌಕರರು ತಮ್ಮ ಕುಟುಂಬವನ್ನು ನಡೆಸುವುದಾದರೂ ಹೇಗೆ. ತನ್ನದೇ ಸಂಸ್ಥೆಯ ನೌಕರರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವಂತಹ ಆದೇಶ ಇದಾಗಿದ್ದು, ಜೀವ ವಿರೋಧಿಯಾಗಿದೆ. ಸಂಸ್ಥೆಗೆ ಆಗುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ತಮ್ಮ ಜೀವಮಾನವಿಡೀ ಸಂಸ್ಥೆಗಾಗಿ ದುಡಿದ ನೌಕರರನ್ನು ಸಂಕಷ್ಟದ ಸಮಯದಲ್ಲಿ ಕೈ ಬಿಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.

ಕಾರ್ಮಿಕರ ಹಿತ ಕಾಯುವುದು ಕೆಎಸ್ಸಾರ್ಟಿಸಿ ಸಂಸ್ಥೆಯ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಹೀಗಾಗಿ ರಜೆ ಕೊಡುವಂತಹ ಪ್ರಸ್ತಾಪವನ್ನು ಕೈಬಿಟ್ಟು, ಎಲ್ಲರಿಗೂ ಜೂನ್ ತಿಂಗಳ ವೇತನ ಕೊಡುವ ವ್ಯವಸ್ಥೆಯನ್ನು ಮಾಡಿ. ಇನ್ನುಳಿದ ವಿಷಯಗಳನ್ನು ಫೆಡರೇಷನ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News