ಪಕ್ಷ ವಿರೋಧಿ ಚಟುವಟಿಕೆ: ಸಿಪಿಎಂ ಪ್ರಾಥಮಿಕ ಸದಸ್ಯತ್ವದಿಂದ ಮಾಜಿ ಶಾಸಕ ಶ್ರೀರಾಮ ರೆಡ್ಡಿ ಉಚ್ಛಾಟನೆ

Update: 2020-07-10 17:31 GMT

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಮಾಜಿ ಶಾಸಕ ಹಾಗೂ ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯರಾಮರೆಡ್ಡಿ ಗುರುವಾರ ಆದೇಶಿಸಿದ್ದಾರೆ.

ಬಾಗೇಪಲ್ಲಿ ಎಪಿಎಂಸಿ ಅಧ್ಯಕ್ಷರ ಚುನಾವಣೆ ವೇಳೆ ಸಿಪಿಎಂ ಪಕ್ಷದ ತತ್ವ ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಜೊತೆಗೆ, ಸಿಪಿಎಂನ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯೊಂದಿಗೆ ಕೈ ಜೋಡಿಸಿ, ಸಿಪಿಎಂ ಪಕ್ಷದಿಂದ ಎಪಿಎಂಸಿಗೆ ಆಯ್ಕೆಯಾಗಿದ್ದ ಸೋಮಶೇಖರರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಲು ಶ್ರೀರಾಮರೆಡ್ಡಿಯವರೇ ಕಾರಣ ಎಂಬ ಆರೋಪ ಹೊರಿಸಲಾಗಿದೆ.

ಜೊತೆಗೆ 2018ರ ಡಿಸೆಂಬರ್ ನಲ್ಲಿ ಸಿಪಿಎಂ ಕೇಂದ್ರ ಸಮಿತಿ ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಸಿಪಿಎಂ ಕೇಂದ್ರ ಸಮಿತಿ ಸದಸ್ಯತ್ವ, ರಾಜ್ಯ ಸಮಿತಿ ಕಾರ್ಯದರ್ಶಿ ಸೇರಿದಂತೆ ಎಲ್ಲ ಚುನಾಯಿತ ಸ್ಥಾನಗಳಿಂದ ತೆಗೆದುಹಾಕಲಾಗಿತ್ತು. ಇದರಿಂದಾಗಿ ಪಕ್ಷದ ಕೇಂದ್ರ ಸಮಿತಿಯ ಮುಂದೆ ಶ್ರೀರಾಮರೆಡ್ಡಿಯವರು ತಮ್ಮ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಪಕ್ಷದ ಶಿಸ್ತಿಗೆ ಒಳಪಟ್ಟು ನಡೆದುಕೊಳ್ಳುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಸದಸ್ಯತ್ವ ಉಳಿಸಿಕೊಂಡಿದ್ದರು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

ಆದರೆ ಶ್ರೀರಾಮರೆಡ್ಡಿಯವರು ಕೇಂದ್ರ ಸಮಿತಿಯ ಮುಂದೆ ಹೇಳಿದಂತೆ ನಡೆದುಕೊಳ್ಳದೆ ಪಕ್ಷದ ಶಿಸ್ತನ್ನು ನಿರಂತರವಾಗಿ ಉಲ್ಲಂಘಿಸುವ ಜೊತೆಗೆ, ತಮ್ಮದೇ ಆದ ಗುಂಪು ಕಟ್ಟಿಕೊಂಡು, ಪಕ್ಷದ ಪದಾಧಿಕಾರಿಗಳ ವಿರುದ್ಧ ನಿರಂತರವಾಗಿ ಟೀಕೆ ಮಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಶ್ರೀರಾಮರೆಡ್ಡಿಯವರಿಗೆ ಕಾರಣ ಕೇಳಿ ಕೇಂದ್ರ ಸಮಿತಿ ನೋಟಿಸ್ ಜಾರಿಗೊಳಿಸಿದ್ದು, ಇದಕ್ಕೆ ಅವರು ಉತ್ತರಿಸಿಲ್ಲ. ಅಲ್ಲದೆ ಜಿಲ್ಲಾ ಸಮಿತಿ ಸಭೆಗೆ ಖುದ್ದು ಹಾಜರಾಗಿ ಕಾರಣ ಹೇಳುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯ ಮಾಡಿರುವ ಹಿನ್ನೆಲೆಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸರ್ವಾನುಮತದಿಂದ ಶ್ರೀರಾಮರೆಡ್ಡಿಯವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯರಾಮರೆಡ್ಡಿ ತಿಳಿಸಿದ್ದಾರೆ.

ಜಿ.ವಿ. ಶ್ರೀರಾಮರೆಡ್ಡಿ ಅವರು ಬಾಗೇಪಲ್ಲಿಯಲ್ಲಿ ಸಿಪಿಎಂ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ 1999ರಲ್ಲಿ ಮತ್ತು 2004ರಲ್ಲಿ ಎರಡು ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಿಪಿಎಂ ಶಾಸಕರಾಗಿ ಆಯ್ಕೆಯಾಗಿದ್ದರು. ಎಡ ಪಂಥೀಯ ಚಳವಳಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಬಾಗೇಪಲ್ಲಿ ತಾಲೂಕಿನಲ್ಲಿ ಸಿಪಿಎಂ ಪಕ್ಷ ಬಲವಾಗಿ ಬೇರೂರಲು ಶ್ರೀರಾಮರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದು, ಇವರನ್ನೇ ಪಕ್ಷದಿಂದ ಉಚ್ಛಾಟಿಸಿರುವುದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News