ತುಮಕೂರು: 30 ಪೊಲೀಸರು ಸೇರಿ ಒಂದೇ ದಿನ 95 ಮಂದಿಗೆ ಕೊರೋನ ಪಾಸಿಟಿವ್, ಇಬ್ಬರು ಸಾವು

Update: 2020-07-10 17:38 GMT

ತುಮಕೂರು,ಜು.10: ತುಮಕೂರು ಜಿಲ್ಲೆಯಲ್ಲಿ 30 ಮಂದಿ ಪೊಲೀಸರು ಸೇರಿದಂತೆ ಒಂದೇ ದಿನ 95 ಕೊರೋನ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಕೊರೋನದಿಂದ ಮೃತಪಟ್ಟವರ ಸಂಖ್ಯೆ 13ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 428ಕ್ಕೆ ಏರಿಕೆಯಾಗಿದೆ.

ತುಮಕೂರು ನಗರದಲ್ಲಿ ಶುಕ್ರವಾರ ಒಂದೇ ದಿನ 69 ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ ಬೆಂಗಳೂರಿನಿಂದ ಬಂದು ಕ್ವಾರೆಂಟೈನ್‍ನಲ್ಲಿದ್ದ 25 ಕೆಎಸ್‍ಆರ್‍ಪಿ ಪೊಲೀಸರು, 5 ಸಿವಿಲ್ ಪೊಲೀಸರು ಸೇರಿದಂತೆ 19 ಜನ ಪೊಲೀಸರಿಗೆ ಕೋರೊನ ಇರುವುದು ದೃಢಪಟ್ಟಿದೆ. ತುಮಕೂರು ನಗರದಲ್ಲಿ ಈವರೆಗೆ ಒಟ್ಟು ಸೊಂಕಿತರ ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಒಂದೇ ದಿನ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ನಗರದ ಜನತೆಯನ್ನ ಬೆಚ್ಚಿಬೀಳಿಸಿದೆ.

ಜಿಲ್ಲೆಯ 5 ಸಿವಿಲ್ ಪೊಲೀಸರ ಪೈಕಿ ಕಳ್ಳಂಬೆಳ್ಳ 2, ಕುಣಿಗಲ್ 1, ತಿಪಟೂರು 1, ತುಮಕೂರು ಟೌನ್ ನಲ್ಲಿ 1 ಪ್ರಕರಣ ದಾಖಲಾಗಿದೆ. ಇನ್ನು ಇಬ್ಬರು ಗರ್ಭಿಣಿಯರು, ಒಬ್ಬರು ಬಾಣಂತಿ, ಓರ್ವ ಸರ್ಕಾರಿ ನೌಕರನಿಗೆ ಕೊರೋನ ಪಾಸಿಟಿವ್ ಬಂದಿದೆ.

95 ಜನರಲ್ಲಿ 8 ಜನರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು, 5 ಜನ ದ್ವಿತೀಯ ಸಂಪರ್ಕದಲ್ಲಿದ್ದ ವರಿಗೆ ಕೊರೋನ ಪಾಸಿಟಿವ್ ಬಂದಿದೆ. 95 ಜನರ ಪೈಕಿ 55 ಜನರಿಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಜುಲೈ ತಿಂಗಳ ಆರಂಭದಲ್ಲಿ ಕೇವಲ 60 ಪ್ರಕರಣಗಳಿದ್ದು 10 ದಿನಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರು, ನರ್ಸ್ ಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬೆಂಬಿಡದೇ ಕಾಡುತ್ತಿದೆ. ಜಿಲ್ಲೆಯಲ್ಲಿ ವರದಿಯಾಗಿರುವ 400ಕ್ಕೂ ಹೆಚ್ಚು ಪ್ರಕರಣಗಳು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬಂದವರಲ್ಲಿ ಕಂಡು ಬಂದಿದೆ.

ಸೋಂಕಿನ ಯಾವ ಲಕ್ಷಣಗಳೂ ಇಲ್ಲದ ವ್ಯಕ್ತಿಗಳಲ್ಲಿಯೂ ಕೊರೋನ ದೃಢಪಟ್ಟಿರುವುದು ಆರೋಗ್ಯ ಇಲಾಖೆ ನಿದ್ದೆಗೆಡೆಸಿದೆ. 2 ರಿಂದ 15 ವರ್ಷದ ಸುಮಾರು 11 ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ಪೋಷಕರಲ್ಲಿ ಹೆಚ್ಚು ಆತಂಕವನ್ನುಂಟು ಮಾಡಿದೆ. ನಗರ ಗ್ರಾಮೀಣವೆನ್ನದೆ ಜಿಲ್ಲೆಯ ಎಲ್ಲೆಡೆ ಸೋಂಕಿತರು ಕಂಡು ಬರುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮವಹಿಸಿ, ಸಮುದಾಯದಲ್ಲಿ ಹೆಚ್ಚು ಹರಡದಂತೆ ತಡೆಯಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸೋಂಕು ಹೆಚ್ಚಳವಾದಂತೆ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚುತ್ತಿದ್ದು, ದಿನಕ್ಕೆ ಒಂದೆರೆಡು ಸಾವು ಇತ್ತಿಚಿನ ದಿನಗಳಲ್ಲಿ ಖಾಯಂ ಆಗಿದೆ. ಅದರಲ್ಲಿಯೂ ವಯೋವೃದ್ದರು ಮತ್ತು ಉಸಿರಾಟದ ತೊಂದರೆ ಇರುವಂತಹವರು ಸಾವನ್ನಪ್ಪುತ್ತಿರುವುದು ಹೆಚ್ಚು ಆತಂಕ ಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿರುವಂತೆ ರೋಗ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬಾರದೇ ತಡವಾಗಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳನ್ನು ಉಳಿಸಲು ಕಷ್ಟವಾಗುತ್ತಿದ್ದು, ರೋಗದ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬರುವಂತೆ ಮನವಿ ಮಾಡಿದ್ದರೂ ಫಲಪ್ರದವಾದಂತೆ ಕಂಡು ಬರುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News