ಸರಕಾರಿ ಗೌರವದೊಂದಿಗೆ ಮೃತ ತಹಶೀಲ್ದಾರ್ ಅಂತ್ಯ ಸಂಸ್ಕಾರ

Update: 2020-07-10 18:04 GMT

ತುಮಕೂರು,ಜು.10: ಜೂನ್ 9ರಂದು ಹತ್ಯೆಗೀಡಾಗಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಅಂತಿಮ ಸಂಸ್ಕಾರವು ಅವರ ಹುಟ್ಟೂರಾದ ಗುಬ್ಬಿ ತಾಲೂಕಿನ ಕದಿರೇಗೌಡನಪಾಳ್ಯದಲ್ಲಿ ಪೊಲೀಸ್ ಗೌರವಗಳೊಂದಿಗೆ ನೆರವೇರಿತು. 

ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಪಡೆದು ಗೌರವ ಸಲ್ಲಿಸಿದರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 

ಚಂದ್ರಮೌಳೇಶ್ವರ ಅವರ ಅಂತ್ಯಕ್ರಿಯೆಯಲ್ಲಿ ಕೋಲಾರ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್, ಕೋಲಾರ ಸಂಸದ ಎಸ್. ಮುನಿಸ್ವಾಮಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ತುಮಕೂರು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್, ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಗಳಾದ ಡಾ.ಪ್ರದೀಪ್ ಕುಮಾರ್, ಮೋಹನ್‍ಕುಮಾರ್ ಸೇರಿದಂತೆ ಅಧಿಕಾರಿಗಳು, ಕುಟುಂಬಸ್ಥರು, ಅಭಿಮಾನಿಗಳು ಭಾಗವಹಿಸಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. 

ತುಮಕೂರು ನಗರದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ: ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಪಾರ್ಥಿವ ಶರೀರವನ್ನು ತುಮಕೂರು ನಗರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಲ್ಲದೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಆರೋಪಿಗೆ ಶಿಕ್ಷೆ ವಿಧಿಸಲು ಒತ್ತಾಯ: ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News