ಮಂಡ್ಯ: ಅಂಬೇಡ್ಕರ್ ನಿವಾಸದ ಮೇಲಿನ ದಾಳಿ ಖಂಡಿಸಿ ದಸಂಸ ಪ್ರತಿಭಟನೆ

Update: 2020-07-10 18:27 GMT

ಮಂಡ್ಯ, ಜು.10: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈನ ನಿವಾಸದ ಮೇಲೆ ದಾಳಿ ಮಾಡಿದ ದುಷ್ಕೃತ್ಯವನ್ನು ಖಂಡಿಸಿ ದಸಂಸ ಒಕ್ಕೂಟದ ಕಾರ್ಯರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡಿ ಮಾತನಾಡಿದ ದಸಂಸ ಮುಖಂಡರು, ಮನುವಾದಿಗಳ ಕ್ರೌರ್ಯ ಈ ಕೃತ್ಯದ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಕೃತ್ಯವೆಸಗಿದ ಸಂಘಟನೆ, ವ್ಯಕ್ತಿಗಳನ್ನು ಸೂಕ್ತ ತನಿಖೆ ನಡೆಸಿ ಕ್ರಮ ಜುರುಗಿಸಬೇಕು. ಈ ಸಂಬಂಧ ಶೀಘ್ರ ತನಿಖೆಗೆ ರಾಷ್ಟ್ರಪತಿಗಳು ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ದೇಶದಲ್ಲಿ ಇಂತಹ ದುಷ್ಕೃತ್ಯಗಳು ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ತಡೆಯಬೇಕು. ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಕೂಡಲೇ ರಾಜ್ಯ ಸರಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ತಾಕೀತು ಮಾಡಿದರು.

ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ಅಂದಾನಿ ಸೋಮನಹಳ್ಳಿ, ವಜ್ರಮುನಿ, ತೂಬಿನಕೆರೆ ಪ್ರಸನ್ನ, ಹುರುಗಲವಾಡಿ ರಾಮಯ್ಯ, ದೇವರಾಜು, ರೈತಸಂಘದ ಮುಖಂಡ ಮಂಜೇಶ್‍ಗೌಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News