ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸದೆ ಚಿತಾಗಾರದಲ್ಲಿ ಮೃತದೇಹ ಇಟ್ಟು ಹೋದರು!

Update: 2020-07-11 08:42 GMT

ಶಿವಮೊಗ್ಗ, ಜು.11: ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ. 

ಕೋವಿಡ್ ಸೋಂಕಿನಿಂದ ಮೃತಪಟ್ಟ ವೃದ್ಧನ ಮೃತದೇಹವನ್ನು ಶುಕ್ರವಾರ ರಾತ್ರಿ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದ ರೋಟರಿ ಚಿತಾಗಾರದಲ್ಲಿ ತಂದಿಟ್ಟು, ಅದರ ಮೇಲೆ ಕಟ್ಟಿಗೆ ಇಟ್ಟು ಹೋಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಂತ್ಯಸಂಸ್ಕಾರ ಮಾಡದೇ ಮೃತದೇಹ ಇಟ್ಟು ಹಾಗೆ ಹೋದ ಕಾರಣ ಬೀದಿ ನಾಯಿಗಳು ಅದನ್ನು ಎಳೆಯಲು ಮುಂದಾಗಿದ್ದವು. ಇದರಿಂದ ಆತಂಕಗೊಂಡ ರಾಜೀವ್ ಗಾಂಧಿ ಬಡಾವಣೆ ನಾಗರಿಕರು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎಚ್.ಸಿ ಯೋಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಮಹಾನಗರ ಪಾಲಿಕೆ ಆಯಕ್ತರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೈದರು.

ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು:

ಸ್ಥಳೀಯರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದಕ್ಕೆ ಕೊರೋನ ಸೋಂಕಿಗೆ ಬಲಿಯಾದವರ ಮೃತದೇಹವನ್ನು ಶವಗಾರದದಲ್ಲಿ ಅಂತ್ಯ ಸಂಸ್ಕಾರಕ್ಕೆ ತರುವ ಅರ್ಧ ಗಂಟೆ ಮೊದಲು ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು. ಅಂತ್ಯ ಸಂಸ್ಕಾರದ ನಂತರ ಸ್ಯಾನಿಟೈಸ್ ಮಾಡಲಾಗುವುದು ಮತ್ತು ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಕುರಿತು ಭರವಸೆ ನೀಡಿದರು.

ಬಳಿಕ ಆಯುಕ್ತರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಧ್ಯರಾತ್ರಿ ಎರಡು ಗಂಟೆ ವೇಳೆಗೆ ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಲು ವ್ಯವಸ್ಥೆ ಕಲ್ಪಿಸಿದರು.

ಶವಾಗಾರದಲ್ಲೇ ಪಿಪಿಇ ಕಿಟ್ ಬಿಟ್ಟುಹೋದ ಸಿಬ್ಬಂದಿ: ಆರೋಪ
ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ನಂತರ ಪಿಪಿಇ ಕಿಟ್ ಸಹ ಸ್ಥಳದಲ್ಲೇ ಬಿಸಾಕಿ ಹೋಗಿದ್ದಾರೆ. ಪಾಲಿಕೆ ಸಿಬ್ಬಂದಿ ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News