ಚಿಕ್ಕಮಗಳೂರು: ಹಾಡಹಗಲೇ ಚಿನ್ನಾಭರಣದ ಅಂಗಡಿ ಲೂಟಿಗೆ ಯತ್ನ: ಪ್ರತಿರೋಧಿಸಿದ ಮಾಲಕನ ಮೇಲೆ ಫೈರಿಂಗ್

Update: 2020-07-11 13:20 GMT

ಚಿಕ್ಕಮಗಳೂರು, ಜು.11: ನಗರದಲ್ಲಿ ಹಾಡುಹಗಲೇ ಆಭರಣವೊಂದಕ್ಕೆ ನುಗ್ಗಿದ ದರೋಡೆಕೋರರ ಗುಂಪೊಂದು ಆಭರಣದ ಅಂಗಡಿ ಮಾಲಕನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದ್ದು, ಅದೃಷ್ಟವಶಾತ್ ಅಂಗಡಿ ಮಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ಬೆಳಗ್ಗೆ 11:30ರ ಸಮಯದಲ್ಲಿ ನಗರದ ಎಂ.ಜಿ ರಸ್ತೆಯಲ್ಲಿರುವ ಕೇಸರಿ ಹೆಸರಿನ ಆಭರಣದ ಅಂಗಡಿಯಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ ಈ ಆಭರಣದ ಅಂಗಡಿ ಎದುರು ಪಲ್ಸರ್ ಬೈಕ್‍ನಲ್ಲಿ ಆಗಮಿಸಿದ್ದ ಮೂವರು ದರೋಡೆಕೋರರು ಬೈಕ್‍ನಿಂದ ಸೀದಾ ಕೇಸರಿ ಆಭರಣದ ಅಂಗಡಿ ಒಳಗೆ ಹೋಗಿದ್ದಾರೆ. ಈ ವೇಳೆ ಅಂಗಡಿ ಮಾಲಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆಂದು ತಿಳಿದು ಬಂದಿದೆ.

ದರೋಡೆಕೋರರು ಚಿನ್ನಾಭರಣ ದೋಚಲು ಯತ್ನಿಸಿದ ವೇಳೆ ಅಂಗಡಿ ಮಾಲಕ ಪ್ರತಿರೋಧ ತೋರಿದ್ದಾರೆ. ಈ ವೇಳೆ ಮೂವರು ದರೋಡೆಕೋರರ ಪೈಕಿ ಓರ್ವ ಅಂಗಡಿ ಮಾಲಕನ ಮೇಲೆ ಮೂವರು ಬಾರಿ ಗುಂಡಿನ ದಾಳಿ ನಡೆಸಿದ್ದಾನೆಂದು ತಿಳಿದು ಬಂದಿದ್ದು, ಗುಂಡಿನ ದಾಳಿ ಬಳಿಕ ಮೂವರು ಆರೋಪಿಗಳು ತಾವು ಬಂದಿದ್ದ ಪಲ್ಸರ್ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಬಂದೂಕಿನ ಗುಂಡು ಅಂಗಡಿ ಮಾಲಕನಿಗೆ ತಗಲದ ಹಿನ್ನೆಲೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗುತ್ತಿದೆ.

ಗುಂಡಿನ ಸದ್ದಿಗೆ ಬೆಚ್ಚಿ ಬಿದ್ದ ಅಕ್ಕಪಕ್ಕದ ಅಂಗಡಿಗಳ ಮಾಲಕರು ಸ್ಥಳಕ್ಕೆ ಬಂದು ನೋಡಿದಾಗ ಕೇಸರಿ ಆಭರಣದ ಅಂಗಡಿ ಮಾಲಕ ತನ್ನ ಅಂಗಡಿಯಲ್ಲಿ ಗುಂಡಿನ ದಾಳಿಗೆ ಅಘಾತಗೊಂಡಿದ್ದನ್ನು ಕಂಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಆಭರಣದ ಅಂಗಡಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಎಸ್ಪಿ ಅಕ್ಷಯ್ ಮಚ್ಚೀಂದ್ರ ಅಂಗಡಿ ಮಾಲಕನಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳ ತಂಡ ನೇಮಿಸಿ ತನಿಖೆಗೆ ಆದೇಶ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಎಲ್ಲೆಡೆ ನಾಕಾಬಂಧಿ ಹಾಕಿದ್ದಾರೆಂದು ತಿಳಿದು ಬಂದಿದೆ.

ಅಂಗಡಿಗೆ ನುಗ್ಗಿದ ವೇಳೆ ಮೂವರು ದರೋಡೆಕೋರರ ಪೈಕಿ ಓರ್ವ ವ್ಯಕ್ತಿ ಹೆಲ್ಮೆಟ್ ಧರಿಸಿದ್ದು, ಉಳಿದ ಇಬ್ಬರು ಟೋಪಿ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ದರೋಡೆಕೋರರ ಗುರುತು ತಿಳಿದು ಬಂದಿಲ್ಲ ಎನ್ನಲಾಗುತ್ತಿದೆ. ಘಟನೆ ಬಳಿಕ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಸ್ಥಳದಲ್ಲಿ ಬಂದೂಕಿನ ಗುಂಡುಗಳು ಪತ್ತೆಯಾಗಿದ್ದು, ಶ್ವಾನದಳ, ವಿಧಿವಿಜ್ಞಾನ ತಂಡದ ಬೆರಳಚ್ಚು ತಜ್ಞರು ಕೇಸರಿ ಚಿನ್ನಾಭರಣಗಳ ಅಂಗಡಿಯಲ್ಲಿ ಪರಿಶೀಲಿಸಿದರು. ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಗರದ ಕೇಸರಿ ಜ್ಯುವೆಲರಿ ಅಂಗಡಿ ಮಾಲಕನ ಮೇಲೆ ಶನಿವಾರ ಬೆಳಗ್ಗೆ 11ರ ಆಸುಪಾಸಿನಲ್ಲಿ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ಆರೋಪಿಗಳು ಕೇಸರಿ ಹೆಸರಿನ ಜ್ಯುವೆಲರಿ ಅಂಗಡಿಗೆ ನುಗ್ಗಿ ಆಭರಣ ದೋಚಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪಿಸ್ತೂಲ್‍ನಿಂದ ಮೂರು ಬಾರಿ ಫೈರಿಂಗ್ ನಡೆಸಿದ್ದಾರೆ. ಮೂವರಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದು, ಇಬ್ಬರು ಕ್ಯಾಪ್ ಧರಿಸಿರುವುದು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿರುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸ್ಥಳ ಪರಿಶೀಲನೆ ನಡೆಸಿದ್ದು, ಆಭರಣ ದೋಚುವ ಉದ್ದೇಶದಿಂದಲೇ ಮೂವರು ಕೃತ್ಯ ನಡೆಸಿರುವ ಬಗ್ಗೆ ಅನುಮಾನವಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗುವುದು.
-ಅಕಾಯ್ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News