ಶಿವಮೊಗ್ಗ: ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ

Update: 2020-07-11 10:50 GMT

ಶಿವಮೊಗ್ಗ, ಜು.11: ನಗರದ ಹಲವು ಕಡೆ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ನಡೆದಿದೆ.

 ಶುಕ್ರವಾರ  ಮಧ್ಯರಾತ್ರಿ ಶಿವಮೊಗ್ಗ ನಗರದ ಹೊರವಲಯ ಹಾಗೂ ಇತರ ಕಡೆಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಬೆಂಕಿ ಕೊಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇಬ್ಬರು ತಮ್ಮ ಬೈಕ್‌ನಲ್ಲಿ ಎಲ್ಲೆಂದರಲ್ಲಿ ವಾಹನಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ಮಲ್ಲಗೆನಹಳ್ಳಿಯ ಮನೆಯ ಮುಂದೆ ನಿಲ್ಲಿಸಿದ 2 ಬೈಕ್‌ಗಳಿಗೆ ಬೆಂಕಿಇಟ್ಟು ಪರಾರಿಯಾಗಿದ್ದಾರೆ. ನಂತರ ಸಿಗೇಹಟ್ಟಿ ಬಿ.ಬಿ.ಸ್ಟೀಟ್ ವಲಯದಲ್ಲಿನ ಮನೆಯ ಮುಂದೆ ನಿಲ್ಲಿಸಿ ಹೊಸ ಆಟೋ ಹಾಗೂ ಕಾರೊಂದಕ್ಕೆ ಬೆಂಕಿ ಇಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕಾ ಮುದ್ರಣ ವಿಭಾಗದಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದ ಯುವಕನೋರ್ವ ಇದನ್ನು ಗಮನಿಸಿ ವಿಡಿಯೊ ಮಾಡಲು ಮುಂದಾದಾಗ  ಆರೋಪಿಗಳು ಓಡಿ ಹೋಗಿದ್ದಾರೆ.

ಕಿಡಿಗೇಡಿಗಳು ಪ್ಲಾಸ್ಟಿಕ್ ಹಾಗೂ ರಟ್ಟುಗಳನ್ನು ತುಂಬಿದ್ದ ಹೊಸ ಲಾರಿಯೊಂದಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲಿ ಬೀಟ್ ಕಾಯುತ್ತಿದ್ದ ದೊಡ್ಡಪೇಟೆಯ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಪೇಟೆ ಸಿಪಿಐ ವಸಂತ್ ಕುಮಾರ್, ಎಸ್‌ಐ ಶಂಕರಮೂರ್ತಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದರು. ಸಮಗ್ರ ತನಿಖೆ‌ ನಡೆಸಿ ಅರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಬರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News