ಜು.12ರಂದು 'ಸಂಡೇ ಲಾಕ್‍ಡೌನ್': ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ, ಅನಗತ್ಯವಾಗಿ ಓಡಾಡಿದರೆ ಬೀಳಲಿದೆ ದಂಡ

Update: 2020-07-11 17:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ಶನಿವಾರ ರಾತ್ರಿಯಿಂದಲೇ ಲಾಕ್‍ಡೌನ್ ಜಾರಿಯಾಗಿದ್ದು, ರವಿವಾರದಂದು ಇಡೀ ರಾಜ್ಯ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡಿದರೆ ದಂಡ ಬೀಳಲಿದೆ.

ಕೊರೋನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ರಾಜ್ಯ ಸರಕಾರ ಪ್ರತಿರವಿವಾರದಂದು ಲಾಕ್‍ಡೌನ್ ಜಾರಿ ಮಾಡಿದೆ. ಅದರ ಭಾಗವಾಗಿ ಮೊದಲನೇ ರವಿವಾರದಂದು ನಡೆದ ಲಾಕ್‍ಡೌನ್‍ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತು. ಇದೀಗ ಎರಡನೇ ಲಾಕ್‍ಡೌನ್ ನಾಳೆ ಇರಲಿದ್ದು, ಎಲ್ಲೆಡೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಾಳೆ(ಜು.12) ಜನಜೀವನ ಅಸ್ತವ್ಯಸ್ಥವಾಗಲಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿರುವ ಲಾಕ್‍ಡೌನ್ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಜಾರಿಯಲ್ಲಿರಲಿದೆ.

ಲಾಕ್‍ಡೌನ್ ವೇಳೆ ಸಾರ್ವಜನಿಕರು ಅನಗತ್ಯವಾಗಿ ಓಡಾಡದಂತೆ ತಪ್ಪಿಸಲು ಎಲ್ಲ ಕಡೆಗಳಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಂದು ವೇಳೆ ಯಾರಾದರೂ ರಸ್ತೆಗಳಲ್ಲಿ ಸಂಚರಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಗೃಹ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ, ನಾಳಿನ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ರವರಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಎಲ್ಲ ಕಡೆಗಳಲ್ಲಿ ಲಾಕ್‍ಡೌನ್ ಇರುವುದರ ಪರಿಣಾಮ ಅಗತ್ಯ ವಸ್ತುಗಳ ಸೇವೆಗಳಿಗೆ ವಿನಾಯಿತಿ ಹೊರತುಪಡಿಸಿ, ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯುವ ಹಾಗಿಲ್ಲ. ದಿನಸಿ ವಸ್ತುಗಳು, ಔಷಧಿ, ಹಾಲು, ತರಕಾರಿ, ಆಸ್ಪತ್ರೆ, ವೈದ್ಯಕೀಯ ಸೌಲಭ್ಯ ಇವುಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಹೋಟೆಲ್‍ಗಳಲ್ಲಿ ಪಾರ್ಸಲ್‍ಗಷ್ಟೇ ಅವಕಾಶ ನೀಡಲಾಗಿದೆ. ಮಾಂಸದಂಗಡಿಗಳಿಗೆ ಅವಕಾಶ ನೀಡಿದ್ದರೆ, ಮದ್ಯದಂಗಡಿಗಳಿಗೆ ಅವಕಾಶವಿರುವುದಿಲ್ಲ.

ಕೆಎಸ್ಸಾರ್ಟಿಸಿ, ಬಿಎಂಟಿಸಿ. ಆಟೋ, ಟ್ಯಾಕ್ಸಿ, ಸೇರಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ವಾರಾಂತ್ಯದ ಎರಡನೇ ಲಾಕ್‍ಡೌನ್‍ಗೆ ಪೊಲೀಸರು ಎಲ್ಲ ಸಿದ್ಧತೆ ನಡೆಸಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಇಂದು ರಾತ್ರಿಯಿಂದಲೇ ಹಾಕಲಾಗುತ್ತದೆ. ಹಾಗೆಯೇ ಭದ್ರತೆಗೆ ಪೊಲೀಸರನ್ನು ನಿಯೋಜಿಸಿದ್ದು, ಅನಗತ್ಯವಾಗಿ ಓಡಾಡುವವರನ್ನು ಪತ್ತೆಹಚ್ಚಿ ಅವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News