ಚಿಕ್ಕಬಳ್ಳಾಪುರ: ದೇಶದಲ್ಲೇ ಮೊದಲ ಅತ್ಯಾಧುನಿಕ ಪ್ರಯೋಗಾಲಯಕ್ಕೆ ಚಾಲನೆ

Update: 2020-07-11 18:17 GMT
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ, ಜು.11: ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಿರುವ ನೂತನ ಕೋವಿಡ್ ಪ್ರಯೋಗಾಲಯ ಇಂದು ಚಿಕ್ಕಳ್ಳಾಪುರದಲ್ಲಿ ಆರಂಭವಾಗಿದ್ದು, ಪ್ರತಿನಿತ್ಯ ಇಲ್ಲಿ ಕನಿಷ್ಠ 500 ಕೋವಿಡ್ ಪರೀಕ್ಷೆಗಳನ್ನು ಮಾಡಲು ಸಾಧ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯೋಗಾಲಯವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಫ್ಲೋರಿಂಗ್‍ನಿಂದ ಯಂತ್ರೋಪಕರಣಗಳ ವರೆಗೂ ಎಲ್ಲವೂ ನೂತನ ತಂತ್ರಜ್ಞಾನವನ್ನು ಹೊಂದಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ನಿರಾತಂಕವಾಗಿ ಪರೀಕ್ಷೆ ನಡೆಸಲು ಸಹಕಾರಿಯಾಗಿದೆ ಎಂದರು.

ಪ್ರಯೋಗಾಲಯದ ಒಳಗೆ ಪ್ರತಿ ಗಂಟೆಗೆ 36 ಬಾರಿ ಗಾಳಿ ಬದಲಾಗುತ್ತದೆ, ಒಳಗಿರುವ ಗಾಳಿ ಫಿಲ್ಟರ್ ಮೂಲಕ ಹೊರ ಹೋಗಿ, ಹೊರಗಿನ ತಾಜಾ ಗಾಳಿ ಒಳ ಬರುತ್ತದೆ. ಈ ಪ್ರಯೋಗಾಲಯದಲ್ಲಿ ಕಂಟಾಮಿನೇಷನ್ ಆಗಲು ಸಾಧ್ಯವೇ ಇಲ್ಲ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿಯೇ ಕಂಟಾಮಿನೇಷನ್ ಆಗಿ, ಇಬ್ಬರು ಮೂವರಿಗೆ ಸೋಂಕು ಹಬ್ಬಿತ್ತು. ಆದರೆ ಇಲ್ಲಿ ಅದು ಸಾಧ್ಯವೇ ಇಲ್ಲ ಎಂದು ಭರವಸೆ ನೀಡಿದರು.

ಈ ಪ್ರಯೋಗಾಲಯದಲ್ಲಿ 96 ವೆಲ್ಸ್ ನಿರ್ಮಿಸಲಾಗಿದ್ದು, ಪ್ರತಿ ದಿನ ಕನಿಷ್ಠ 500 ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವ ತಜ್ಞರಿಗೆ ಈಗಾಗಲೇ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ತರಬೇತಿ ನೀಡಲಾಗಿದೆ. ಇಂದಿನಿಂದಲೇ ಕಾರ್ಯಾರಂಭ ಮಾಡಲಿದ್ದು, ಇದರಿಂದ ಪರೀಕ್ಷಾ ವರದಿ ಶೀಘ್ರ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News