ಸಾಮಾಜಿ ಹೋರಾಟಗಾರ ದಲಿತ ಮುಖಂಡ ಮರಿದಂಡಯ್ಯ ಬುದ್ಧ ನಿಧನ

Update: 2020-07-11 18:27 GMT

ಮೈಸೂರು,ಜು.11: ಮೈಸೂರಿನ ಅಶೋಕಪುರಂನ ನಿವಾಸಿ, ಸಾಮಾಜಿಕ ಹೋರಾಟಗಾರ, ದಲಿತ ಮುಖಂಡ ಮರಿದಂಡಯ್ಯ ಬುದ್ಧ (57) ಅನಾರೋಗ್ಯದಿಂದ ಶುಕ್ರವಾರ ಸಂಜೆ ಸಂಜೆ 7 ಗಂಟೆಗೆ ಹಾಲಿ ವಾಸವಿದ್ದ ಗಂಗೋತ್ರಿ ಲೇಔಟ್‍ನ ನಿವಾಸದಲ್ಲಿ ನಿಧನ ಹೊಂದಿದರು.

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಯಾವುದೇ ಸಾಮಾಜಿಕ, ದಲಿತ ಪರ, ಪ್ರಗತಿಪರ ಹೋರಾಟಗಳು ನಡೆದರೂ ಮರಿದಂಡಯ್ಯ ಬುದ್ಧ ಹಾಜರಿರುತ್ತಿದ್ದರು. ಬಿಳಿ ಪೈಜಾಮದೊಂದಿಗೆ ಕೈಯಲ್ಲಿ ಒಂದು ಡೈರಿ ಹಿಡಿದುಕೊಂಡೇ ಇರುತ್ತಿದ್ದರು. ಸದಾ ಸಮಾಜದಲ್ಲಿ ಉಂಟಾಗುವ ದಲಿತರು ಶೋಷಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಚಿಂತಿಸುತ್ತಿದ್ದರು.

ಇವರು ತಾಯಿ ಪುಟ್ಟನಂಜಮ್ಮ ಹಾಗೂ ಮೂವರು ಸೋದರ, ಸೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವಿವಾಹಿತರಾಗಿದ್ದ ಇವರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ 12 ಗಂಟೆಗೆ ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ನೆರವೇರಿತು. 

ಇವರ ನಿಧನಕ್ಕೆ ಪ್ರಗತಿಪರ ಚಿಂತಕರುಗಳಾದ ಡಾ.ವಿ.ಲಕ್ಷ್ಮಿನಾರಾಯಣ್, ರತಿರಾವ್, ನಾ.ದಿವಾಕರ, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಾಜಿ ಮೇಯರ್ ಪುರುಷೋತ್ತಮ್, ಸಿಪಿಐಎಂ ನ ಬಸವರಾಜು, ಪಂಡಿತಾರಾಧ್ಯ, ಶಿವಸ್ವಾಮಿ, ಅಶೋಕಪುರಂ ರೇವಣ್ಣ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಅಶೋಕಪುರಂನ ವಿಶ್ವಜ್ಞಾನಿ ಯುವಕ ಸಂಘ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯುವ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿ, ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ, ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News