ಚಿಕ್ಕಮಗಳೂರು: 9 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 141ಕ್ಕೇರಿಕೆ

Update: 2020-07-12 16:59 GMT

ಚಿಕ್ಕಮಗಳೂರು, ಜು.12: ಕಾಫಿನಾಡಿನಲ್ಲಿ ಕೊರೋನ ಆರ್ಭಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ಅಲ್ಲೊಂದು, ಇಲ್ಲೊಂದೆಂಬಂತೆ ವರದಿಯಾಗುತ್ತಿದ್ದ ಪಾಸಿಟಿವ್ ಪ್ರಕರಣಗಳು ಒಂದೇ ದಿನದಲ್ಲಿ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ರವಿವಾರ 9 ಕೊರೋನ ಪಾಸಿಟಿವ್ ಪತ್ತೆಯಾಗಿರುವುದು ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ.

ರವಿವಾರ ಬೆಳಕಿಗೆ ಬಂದಿರುವ 9 ಪ್ರಕರಣಗಳ ಪೈಕಿ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿದ್ದು, ಕಡೂರು, ತರೀಕೆರೆ, ಶೃಂಗೇರಿ ತಾಲೂಕುಗಳಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಚಿಕ್ಕಮಗಳೂರು ತಾಲೂಕಿನ 2 ಪ್ರಕರಣಗಳ ಪೈಕಿ ನಗರದಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಪಾಸಿಟಿವ್ ಬಂದಿದ್ದರೆ, ತಾಲೂಕಿನ ಕಳಸಪುರ ಗ್ರಾಮದಲ್ಲಿ 33 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ವರದಿಯಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣವೊಂದರಲ್ಲೇ 55 ವರ್ಷ ಹಾಗೂ 7 ವರ್ಷ ವಯಸ್ಸಿನ ಇಬ್ಬರಿಗೆ ಪಾಸಿಟಿವ್ ಇರುವುದು ರವಿವಾರ ವರದಿಯಾಗಿದೆ. ಈ ಎರಡೂ ಪಾಸಿಟಿವ್ ಪ್ರಕರಣಗಳು ಇತ್ತೀಚೆಗೆ ಕಳಸ ಪಟ್ಟಣದ ಕೆಎಂ ರಸ್ತೆಯಲ್ಲಿರುವ ತನ್ನ ಮಗಳ ಮನೆಗೆ ಬಂದು ನೆಲೆಸಿದ್ದ ವೃದ್ಧೆಯೊಬ್ಬರ ಪ್ರಾಥಮಿಕ ಸಂಪರ್ಕಗಳಾಗಿವೆ ಎಂದು ತಿಳಿದು ಬಂದಿದೆ.

ಕೊಪ್ಪ ತಾಲೂಕಿನಲ್ಲಿ ಅಸಗೋಡು ಗ್ರಾಮದ 27 ವರ್ಷದ ವ್ಯಕ್ತಿಯಲ್ಲಿ ಹಾಗೂ ಬಿಂತ್ರವಳ್ಳಿ ಗ್ರಾಮದ 54 ವರ್ಷದ ವ್ಯಕ್ತಿಯಲ್ಲಿ ಕೊರೋನ ಪಾಸಿಟಿವ್ ಇರುವುದು ವರದಿಯಾಗಿದೆ. ಕಡೂರು ತಾಲೂಕಿನಲ್ಲಿ ಬಂಧಿಕೊಪ್ಪಲು ಗ್ರಾಮದ 36 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ, ತರೀಕೆರೆ ತಾಲೂಕಿನ ದೋರನಾಳು ಗ್ರಾಮದ 25 ವರ್ಷದ ವ್ಯಕ್ತಿಯಲ್ಲಿ ಹಾಗೂ ಶೃಂಗೇರಿ ತಾಲೂಕಿನ ಹೆಬ್ಬಾರುಗದ್ದೆಯ 28 ವರ್ಷದ ವ್ಯಕ್ತಿಯಲ್ಲಿ ಪಾಸಿಟಿವ್ ಇರುವುದು ರವಿವಾರ ಪ್ರಯೋಗಾಲಯದ ವರದಿಯಿಂದ ಬೆಳಕಿಗೆ ಬಂದಿದೆ.

ರವಿವಾರ ವರದಿಯಾಗಿರುವ ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ನಿರ್ದಿಷ್ಟ ಪ್ರದೇಶಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ. ಸೋಂಕಿತರನ್ನು ಚಿಕ್ಕಮಗಳೂರು ನಗರದ ಕೊರೋನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿವಾರ ವರದಿಯಾಗಿರುವ 9 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 141ಕ್ಕೇರಿದೆ. ಈ ಪೈಕಿ 84 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತ ಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿರುವ ಸಕ್ರೀಯ ಪ್ರಕರಣಗಳ ಸಂಖ್ಯೆ 54 ಆಗಿದೆ.

ಒಮ್ಮೆ ನೆಗೆಟಿವ್, ಮತ್ತೊಮ್ಮೆ ಪಾಸಿಟಿವ್: ಸಿ.ಟಿ.ರವಿ ಟ್ವೀಟ್

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರಿಗೆ ಪಾಸಿಟಿವ್ ಇರುವುದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮದವರಿಗೆ ತಿಳಿಸಿದ್ದರು. ಈ ಸುದ್ದಿ ಶನಿವಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸಚಿವ ಸಿ.ಟಿ.ರವಿ, "ನನಗೆ ಸೋಂಕಿನ ಲಕ್ಷಣಗಳಿಲ್ಲ, ತೋಟದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದೇನೆ" ಎಂದು ಬರೆದುಕೊಂಡಿದ್ದರು.

ರವಿವಾರ ಮತ್ತೆ ಟ್ವೀಟ್ ಮಾಡಿರುವ ಅವರು "ನಾನು ಎರಡು ಬಾರಿ ಕೊರೋನ ಪರೀಕ್ಷೆ ಮಾಡಿಸಿದ್ದೆ, ಒಮ್ಮೆ ನೆಗೆಟಿವ್, ಮತ್ತೊಮ್ಮೆ ಪಾಸಿಟಿವ್ ವರದಿ ಬಂದಿದೆ. ಹಾಗಾಗಿ ಮೂರನೇ ಬಾರಿಗೆ ಕೊರೋನ ಪರೀಕ್ಷೆಗೆ ಒಳಗಾಗಿದ್ದು, ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News