ಉಪರಾಷ್ಟ್ರಪತಿ ವೆಂಕಯ್ಯನಾಯ್ದು ಕಾರ್ಯದರ್ಶಿ ಹೆಸರಿನಲ್ಲಿ ವಂಚನೆಗೆ ಯತ್ನ: ಪ್ರಕರಣ ದಾಖಲು

Update: 2020-07-12 17:02 GMT

ಬೆಳಗಾವಿ, ಜು.12: ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರ ಕಾರ್ಯದರ್ಶಿ ಹೆಸರಿನಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ಆಪ್ತ ಸಹಾಯಕ ಕಚೇರಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿಗೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಆಪ್ತ ಸಹಾಯಕ ಕಾರ್ಯದರ್ಶಿ ಆಗಿರುವ ಜಯಕುಮಾರ್ ಎಂಬವರಿಗೆ ಉಪರಾಷ್ಟ್ರಪತಿ ಕಾರ್ಯದರ್ಶಿ ಐ.ವಿ. ಸುಬ್ಬರಾವ್ ಹೆಸರಿನಲ್ಲಿ ಕರೆ ಮಾಡಿ ಅಪರಾಧ ಪ್ರಕರಣವೊಂದರಲ್ಲಿ ನ್ಯಾಯಾಧೀಶರೊಂದಿಗೆ ಮಾತನಾಡಬೇಕು. ತನ್ನನ್ನು ಸಂಪರ್ಕಿಸುವಂತೆ ಮೊಬೈಲ್ ಮೊಬೈಲ್ ಸಂಖ್ಯೆ 070138476677 ಮತ್ತು 0701384660 ಹಾಗೂ ದೂರವಾಣಿ ಸಂಖ್ಯೆ 0110112264 ಸಂಪರ್ಕಿಸುವಂತೆ ಹೇಳಿದ್ದ ಎನ್ನಲಾಗಿದೆ.

ಈ ಕರೆಗಳನ್ನು ನ್ಯಾಯಾಧೀಶರ ಕಾರ್ಯದರ್ಶಿಗಳು ಪರಿಶೀಲಿಸಿದಾಗ ಉಪ ರಾಷ್ಟ್ರಪತಿಗಳ ಕಾರ್ಯದರ್ಶಿ ಮಾಡಿಲ್ಲದಿರುವುದು ಗೊತ್ತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಕರೆಯ ಮೂಲ ಪತ್ತೆ ಹಚ್ಚುವಂತೆ ಹೈಕೋರ್ಟ್ ವಿಚಕ್ಷಣಾ ದಳಕ್ಕೆ ಸೂಚಿಸಿದ್ದರು. ವಿಚಾರಣೆ ನಡೆಸಿದ ವಿಚಕ್ಷಣಾ ದಳ, ಹೈಕೋರ್ಟ್ ನ್ಯಾಯಾಧೀಶರ ಕಚೇರಿಗೆ ಆರೋಪಿ ಸುಜನ್ ಇಂಟರ್ ನೆಟ್ ಕರೆ ಮಾಡಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೃತ್ಯವೆಸಗಿರುವ ಸುಜನ್ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ವಿಚಕ್ಷಣಾ ದಳದ ಎಸಿಪಿ ಪ್ರೇಮಸಾಯಿ ಗುಡ್ಡಪ್ಪ ರೈ ನೀಡಿರುವ ದೂರಿನ್ವಯ ಎಫ್‍ಐಆರ್ ದಾಖಲಿಸಿಕೊಂಡು ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News