ಮರುಭೂಮಿಯಲ್ಲಿ ರಾಜಕೀಯ ಬಿರುಗಾಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಲಿರುವ ಸಚಿನ್ ಪೈಲಟ್ ?

Update: 2020-07-13 05:35 GMT

ಜೈಪುರ, ಜು.13: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಕೆಡವಲು ಪಣ ತೊಟ್ಟಂತಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

30 ಶಾಸಕರ ಬೆಂಬಲ ಇದೆ ಎಂದು ಪೈಲಟ್ ಹೇಳಿಕೊಂಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರವನ್ನು ಕಳೆದುಕೊಂಡ ಕೇವಲ ಮೂರು ತಿಂಗಳಲ್ಲಿ ರಾಜಸ್ಥಾನ ಸರ್ಕಾರ ಕೂಡಾ ಕಾಂಗ್ರೆಸ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

ಸೋಮವಾರ ನಡ್ಡಾ ಅವರನ್ನು ಭೇಟಿಯಾದ ಬಳಿಕ ಪೈಲಟ್ ತಮ್ಮ ಮುಂದಿನ ರಾಜಕೀಯ ನಡೆ ಪ್ರಕಟಿಸುವರು ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಸದ್ಯಕ್ಕೆ ಬಿಜೆಪಿ ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು, ರಾಜಸ್ಥಾನದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಬಲಾಬಲ ಪರೀಕ್ಷೆ ಬಳಿಕ ಅಖಾಡಕ್ಕೆ ಧುಮುಕಲಿದೆ ಎಂದು ಹೇಳಲಾಗಿದೆ. ಸಚಿನ್ ಪೈಲಟ್ ಅವರಿಗೆ ಎಷ್ಟು ಸದಸ್ಯರ ಬೆಂಬಲವಿದೆ ಎನ್ನುವುದು ಮುಖ್ಯಮಂತ್ರಿ ಕರೆದಿರುವ ಸಿಎಲ್‍ಪಿ ಸಭೆ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ.

ಭಿನ್ನಮತೀಯ ಶಾಸಕರು ಗೆಹ್ಲೋಟ್ ಜತೆ ರಾಜಿಗೆ ನಿರಾಕರಿಸಿದ್ದು, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಘೋಷಿಸಿದ್ದಾರೆ. ಇದಕ್ಕೂ ಮುನ್ನ ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲೂ ಇದೇ ತಂತ್ರ ಅನುಸರಿಸಿ ಬಿಜೆಪಿ ಅಧಿಕಾರದ ಸೂತ್ರ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News