ರಾಷ್ಟ್ರ ಧ್ವಜಗಳ ಮಾರಾಟದಲ್ಲಿ ಭಾರೀ ಕುಸಿತ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು

Update: 2020-07-13 12:30 GMT
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಜು.13: ಕೊರೋನ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದ್ದು, ಇದೇ ಕೆಲಸವನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ಮಿಕರೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರ ಧ್ವಜಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಗ್ರಾಮೋದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೊರೋನ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲವಾಗಿರುವುದರಿಂದ ಕೆಲಸಕ್ಕೆ ಬರಲು ಆಗುತ್ತಿಲ್ಲ. ಮತ್ತೊಂದು ಕಡೆ ಈಗಾಗಲೇ ತಯಾರಿಸಿದ ಧ್ವಜಗಳನ್ನು ಸಾಗಾಟ ಮಾಡಲು ಸಾರಿಗೆ ಸಮಸ್ಯೆ ಉದ್ಭವಿಸಿರುವುದರಿಂದ ಹಾಗೂ ಕೊಂಡುಕೊಳ್ಳುವವರ ಸಂಖ್ಯೆ ಇಳಿಮುಖವಾಗಿದ್ದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ(ಬಿಐಎಸ್)ಯಿಂದ ಮಾನ್ಯತೆ ಪಡೆದಿದ್ದು, ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರ ಧ್ವಜವನ್ನು ಸರಬರಾಜು ಮಾಡುತ್ತದೆ. ಜೂನ್ ಕೊನೆಯ ವಾರದಲ್ಲಿ ಹೊರ ರಾಜ್ಯಗಳಿಗೆ ರಾಷ್ಟ್ರ ಧ್ವಜಗಳ ಪಾರ್ಸೆಲ್ ಕಳುಹಿಸಬೇಕಾಗಿತ್ತು. ಆದರೆ, ಸಾರಿಗೆ ಸಮಸ್ಯೆ ಉದ್ಭವಿಸಿರುವುದರಿಂದ ಇಲ್ಲಿಯವರೆಗೂ ಪಾರ್ಸೆಲ್ ಕಳುಹಿಸಲಾಗಿಲ್ಲ ಎನ್ನುತ್ತಾರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಧ್ವಜಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಆದರೆ, ಕೊರೋನ ಭೀತಿಯಿಂದಾಗಿ ಆಧಾಯದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News