ಶೀಘ್ರದಲ್ಲಿ ಕಲಬುರಗಿಯಲ್ಲಿ ಮತ್ತೊಂದು ಕೋವಿಡ್ ಲ್ಯಾಬ್: ಡಾ.ಉಮೇಶ್ ಜಾಧವ್

Update: 2020-07-13 12:54 GMT

ಕಲಬುರಗಿ, ಜು.13: ಶೀಘ್ರದಲ್ಲೇ ನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ಪತ್ತೆ ಮಾಡುವ ಪ್ರಯೋಗಾಲಯ ಆರಂಭಿಸಲಾಗುತ್ತಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.

ಇಂದು (ಸೋಮವಾರ) ಖುದ್ದು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಅವರ ಜೊತೆ ಇಎಸ್ಐಸಿ ಅಸ್ಪತ್ರೆಗೆ ಭೇಟಿ ನೀಡಿ ಪ್ರಯೋಗಾಲಯ ಸ್ಥಾಪನೆ ಕುರಿತು ದಿಲ್ಲಿಯ ಕಾರ್ಮಿಕ ಮಂತ್ರಾಲಯ ಸೇರಿದಂತೆ ಇನ್ನಿತರರೊಂದಿಗೆ ನಡೆಸಲಾದ ಪತ್ರ ವ್ಯವಹಾರಗಳನ್ನು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು. ಜೂನ್ 30 ರೊಳಗೆ ಲ್ಯಾಬ್ ಆರಂಭವಾಗಬೇಕಿತ್ತು. ಆದರೆ, ಇನ್ನೂ ಯಾಕೆ ಶುರುವಾಗಿಲ್ಲ ಎಂದು ಇಎಸ್ಐಸಿ ನಿರ್ದೇಶಕ ನಾಗರಾಜ್ ಹಾಗೂ ವೈದ್ಯರನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಈಗಾಗಲೇ ಕೊಠಡಿಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಯೋಗಾಲಯಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಆರ್ಟಿಪಿಸಿಆರ್ ಯಂತ್ರ ಸೇರಿದಂತೆ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಾಮಾಗ್ರಿಗಳನ್ನು ಪೂರೈಸಲು ಗುತ್ತಿಗೆ ಸಂಸ್ಥೆಗಳು ಅಸಕ್ತಿ ತೋರುತ್ತಿಲ್ಲ. ಲಾಕ್ಡೌನ್, ಫ್ಯಾಕ್ಟರಿಗಳು ಬಂದ್ ಆಗಿವೆ ಎಂಬ ಮತ್ತಿತರ ಸಬೂಬು ಹೇಳುತ್ತಿದ್ದಾರೆ. ಕೇವಲ ಸಣ್ಣ-ಪುಟ್ಟ ಸಾಮಾಗ್ರಿಗಳಷ್ಟೆ ಪೂರೈಕೆಯಾಗಿವೆ. ಪ್ರಮುಖವಾದ ಆರ್ಟಿಪಿಸಿಆರ್ ಯಂತ್ರ ಇನ್ನೂ ಬಂದಿಲ್ಲ. ಈ ಸಂಬಂಧ ದಿಲ್ಲಿಯ ಗುತ್ತಿಗೆ ಸಂಸ್ಥೆಗೆ ಫೋನ್ ಮಾಡಿದರೂ, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಉತ್ತರ ನೀಡಿದರು.

ಕೂಡಲೇ ಆ ಸಂಸ್ಥೆಗೆ ಫೋನ್ ಮಾಡುವಂತೆ ಸಂಸದರು ಸೂಚಿಸಿ, ಅಧಿಕಾರಿಗಳು ಫೋನ್ ಮಾಡಿ ಮಾತು ಆರಂಭಿಸಿದ್ದಂತೆ ಆ ಕಡೆಯಿಂದ ಫೋನ್ ಸ್ಥಗಿತಗೊಳಿಸಲಾಯಿತು. ಈ ಸಂಬಂಧ ಕಾರ್ಮಿಕ ಮಂತ್ರಾಲಯದ ಜಂಟಿ ನಿರ್ದೇಶಕರಾದ ಅನುರಾಧ ಪ್ರಸಾದ್ ಅವರಿಗೆ ಫೋನ್ ಮಾಡಿದ ಸಂಸದರು, ಪರಿಸ್ಥಿತಿಯನ್ನು ವಿವರಿಸಿದರು. ಪ್ರಯೋಗಾಲಯಕ್ಕೆ ಆರ್ಟಿಪಿಸಿಆರ್ ಸಾಧನ ಪೂರೈಸದ ಗುತ್ತಿಗೆ ಸಂಸ್ಥೆಯನ್ನು ಕೂಡಲೇ ಬ್ಲಾಕ್ ಲೀಸ್ಟ್ ಗೆ ಹಾಕುವಂತೆ ಸೂಚಿಸಿದರು.

ಈ ವೇಳೆ ಫೋನ್ ನಲ್ಲೇ ಅನುರಾಧ ಪ್ರಸಾದ್ ಅವರು ಮಾತನಾಡಿ, ಈಗಾಗಲೇ ಕರ್ನಾಟಕದ ಕೆಲ ಜಿಲ್ಲೆಗಳು ಪ್ರಯೋಗಾಲಕ್ಕೆ ಬೇಕಾದ ಸಾಮಾಗ್ರಿಗಳನ್ನು ರಾಜ್ಯ ಸರ್ಕಾರದಿಂದಲೇ ಪಡೆದಿದ್ದು, ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಪ್ರಯೋಗಾಲಯದ ಪರಿಕರಗಳನ್ನು ಶೀಘ್ರ ಪಡೆಯುವಂತೆ ಇಎಸ್ಐಸಿ ನಿರ್ದೇಶಕ ನಾಗರಾಜ್ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಂಸದ ಉಮೇಶ್ ಜಾಧವ್ ಅವರು ಸೂಚನೆ ಮೇರೆಗೆ, ಇಎಸ್ಐಸಿ ಅಧಿಕಾರಿಗಳು, ಸ್ಥಳದಲ್ಲಿಯೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಸಿದ್ಧಪಡಿಸಿ ರವಾನಿಸಿದರು. ಈ ಸಂದರ್ಭದಲ್ಲಿ ಇಎಸ್ಐಸಿ ನಿರ್ದೇಶಕ ಡಾ. ಇ. ಎಲ್. ನಾಗರಾಜ್, ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್, ಸಹಾಯಕ ಪ್ರಾಧ್ಯಾಪಕ ಡಾ. ರವೀಶ್ ಇನ್ನಿತರರು ಹಾಜರಿದ್ದರು.

ಸಭೆ: ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಟೆಸ್ಟ್ ಪ್ರಯೋಗಾಲಯ ಕುರಿತು ಇಎಸ್ಐಸಿ ಮೆಡಿಕಲ್ ಕಾಲೇಜು, ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್ ಆಸ್ಪತ್ರೆಯ ಅಡಳಿತ ಅಧಿಕಾರಿಗಳು ಹಾಗೂ ವೈದ್ಯರ ಜೊತೆ ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಂಸದ ಡಾ. ಉಮೇಶ್ ಜಾಧವ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮುತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಜಿಲ್ಲಾಧಿಕಾರಿ ಶರತ್. ಬಿ, ಮೆಡಿಕಲ್ ಕಾಲೇಜು ಮುಖ್ಯಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News