ಸಿ.ಟಿ ರವಿಗೆ ಕೊರೋನ ಪಾಸಿಟಿವ್: ಕೋವಿಡ್ ಚಿಕಿತ್ಸಾ ಘಟಕಕ್ಕೆ ದಾಖಲಾಗದ ಸಚಿವರ ವಿರುದ್ಧ ಜೆಡಿಎಸ್ ಗರಂ

Update: 2020-07-13 13:18 GMT

ಚಿಕ್ಕಮಗಳೂರು,ಜು.1: ಇತ್ತೀಚೆಗೆ ಸಚಿವ ಸಿ.ಟಿ.ರವಿಗೆ ಕೊರೋನ ಪಾಸಿಟಿವ್ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಪಾಸಿಟಿವ್ ಇದ್ದರೂ ಸಚಿವ ಸಿ.ಟಿ.ರವಿ ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದನ್ನು ಬಿಟ್ಟು ತಮ್ಮ ಗೆಸ್ಟ್ ಹೌಸ್ ನಲ್ಲಿ ಕುಳಿತುಕೊಂಡು ನನಗೆ ಕೊರೋನ ಸೋಂಕು ಇಲ್ಲ ಎಂದು ಟ್ವೀಟ್ ಮಾಡಿ ಬೇಜವಬ್ದಾರಿ ಪ್ರದರ್ಶಿಸಿದ್ದಾರೆ. ಈ ಮೂಲಕ ಅವರು ಸರಕಾರದ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ.ಕೆ.ಸುಧಾಕರ್ ಅವರು ಸಿ.ಟಿ.ರವಿ ಅವರಿಗೆ ಕೊರೋನ ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದರೂ ಸಿ.ಟಿ.ರವಿ ಇದನ್ನು ನಿರ್ಲಕ್ಷಿಸಿದ್ದಾರೆ. ಸಚಿವ ಸಿ.ಟಿ.ರವಿ ಚಿಕ್ಕಮಗಳೂರು-ಬೆಂಗಳೂರು ನಡುವೆ ಪದೇ ಪದೇ ಪ್ರಯಾಣ ಮಾಡಿದ್ದಾರೆ. ಸಿ.ಟಿ.ರವಿ ಅವರ ಹೇಳಿಕೆಯಂತೆ ಇವರಿಗೆ ಒಮ್ಮೆ ಕೊರೋನ ನೆಗಟಿವ್ ಬಂದಿತ್ತು. ನಂತರ ಪಾಸಿಟಿವ್ ಬಂದಿದೆ. ಆದರೆ ಪಾಸಿಟಿವ್ ಬಂದ ಕೂಡಲೇ ಅವರು ಕೋವಿಡ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಬಿಟ್ಟು ಮತ್ತೊಮ್ಮೆ ಕೊರೋನ ಟೆಸ್ಟ್ ಮಾಡಿಸುವುದಾಗಿ ಹೇಳಿಕೆ ನೀಡಿ, ಜಿಲ್ಲೆಯ ಮತ್ತು ರಾಜ್ಯದ ಜನರನ್ನು ಮತ್ತು ನೆಲದ ಕಾನೂನನ್ನು ಗಾಳಿಗೆ ತೂರಿದ್ದಾರೆಂದು ದೇವರಾಜ್ ಟೀಕಿಸಿದ್ದಾರೆ.

ಸೋಮವಾರ ಮತ್ತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕೊರೋನ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ ಎಂದು ಅವರೇ ಹೇಳಿಕೆ ನೀಡಿದ್ದು, ಸಚಿವ ಸಿ.ಟಿ.ರವಿ ಅವರು ಮಹಾತ್ಮಾ ಗಾಂಧಿ, ಡಾ.ಅಂಬೇಡ್ಕರ್ ಅವರಂತಹ ನಾಯಕರಿಂದ ಹಿಡಿದು ದೇಶ ಮತ್ತು ವಿದೇಶಗಳ ಎಲ್ಲಾ ನಾಯಕರನ್ನೂ ಟೀಕಿಸಿ ಪರಮವೀರರು ಎಂದು ಬಿರುದು ಪಡೆದವರು. ಈಗ ಕೋವಿಡ್ ಬಾಧಿಸಿರುವ ಸಂದರ್ಭದಲ್ಲೂ ಕಾನೂನು, ಅಧಿಕಾರಿಗಳು ಮತ್ತು ಜಿಲ್ಲೆಯ ಜನರಿಗೆ ಸವಾಲೆಸೆದಿರುವ ಅವರು ನಾನು ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ವೈದ್ಯರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ನಾನು ಮನೆಯಲ್ಲೇ ಇರುತ್ತೇನೆ ಎಂದು ಹೇಳುವ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಸವಾಲೆಸೆದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಮಂತ್ರಿ ಸವಾಲು ಹಾಕುತ್ತಿರುವಾಗ ನಾಳೆ ಸಾಮಾನ್ಯ ಜನರೂ ಇದೇ ದಾರಿಯಲ್ಲಿ ಕೋವಿಡ್ ಪಾಸಿಟಿವ್ ಬಂದಾಗ ನಾವೂ ಮನೆಯಲ್ಲೇ ಇರುವುದಾಗಿ ಹೇಳಿದರೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅದಕ್ಕೆ ಸಮ್ಮತಿಸುತ್ತಾ? ಎಂದು ದೇವರಾಜ್ ಪ್ರಶ್ನಿಸಿದ್ದಾರೆ.

ನೆಲದ ಕಾನೂನಿಗೆ ಗೌರವ ಕೊಡದೇ ಅಧಿಕಾರಿಗಳು ಮತ್ತು ಜಿಲ್ಲಾಡಳಿತವನ್ನು ಪೇಚಿಗೆ ಸಿಲುಕಿಸಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಸಿ.ಟಿ.ರವಿಯವರನ್ನು ಸಿಎಂ ಯಡಿಯೂರಪ್ಪ ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಹಾಗೂ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಿ.ಟಿ.ರವಿಯವರನ್ನು ಕೂಡಲೇ ಬಂಧಿಸಿ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತದ ಸಂವಿಧಾನದಡಿ ಅಧಿಕಾರ ಸ್ವೀಕರಿಸಿ ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಬದ್ಧತೆ ತೋರಿಸಬೇಕಾದ ಸಚಿವ ಸಿ.ಟಿ.ರವಿಯವರು ಬೇಜವಾಬ್ದಾರಿತನ ತೋರಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗಿರುವ ಸೌಜನ್ಯ ಕೂಡ ಇವರಿಗೆ ಇಲ್ಲ ಎಂಬುವುದು ಸಾಬೀತಾಗಿದೆ ಎಂದು ಟೀಕಿಸಿರುವ ಎಚ್.ಎಚ್.ದೇವರಾಜ್, ಸಚಿವ ಸಿ.ಟಿ.ರವಿ ಈ ದೇಶದ ಕಾನೂನುಗಳನ್ನು ಗೌರವಿಸುವುದು ನಿಜವಾದಲ್ಲಿ ಕೂಡಲೇ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಲಿ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News