ಹೋಂ ಕ್ವಾರಂಟೈನ್ ಗೆ ಒಳಗಾದ ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-07-13 13:26 GMT

ಬೆಂಗಳೂರು, ಜು. 13: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಮಧ್ಯೆ ತಮ್ಮ ಆಪ್ತರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಚಿವರೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಅವರು ಶೀಘ್ರವೇ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾರೈಸಿದ್ದಾರೆ. ನಾಲ್ಕೈದು ಮಂದಿ ಶಾಸಕರು, ಓರ್ವ ಸಂಸದರಿಗೆ ಕೆಲದಿನಗಳ ಹಿಂದೆ ಕೊರೋನ ಸೋಂಕು ಪಾಜಿಟಿವ್ ಬಂದಿತ್ತು. ಇದೀಗ ಸಚಿವರಿಗೂ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗುಣಮುಖನಾಗಿ ನಿಮ್ಮಲ್ಲರೊಂದಿಗೆ ಕೆಲಸ ಮಾಡುವೆ: `ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್-19 ಪಾಸಿಟಿವ್ ಇದೆ ಎಂಬುದು ದೃಢವಾಗಿದೆ, ಆದರೆ, ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆ ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ' ಎಂದು ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

`ನಿನ್ನೆ ನಾನು, ನನ್ನ ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್-19 ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದೆವು. ನನ್ನ ಪತ್ನಿ ಪಲ್ಲವಿ, ನನ್ನ ಗನ್‍ಮ್ಯಾನ್, ಚಾಲಕ ಸೇರಿ ಕಚೇರಿ ಸಿಬ್ಬಂದಿ ಎಲ್ಲರಿಗೂ ಕೊರೋನ ಸೋಂಕು ನೆಗೆಟಿವ್ ಬಂದಿದೆ' ಎಂದು ಸಚಿವ ಸಿ.ಟಿ.ರವಿ ಅವರು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಾನು ಕ್ವಾರಂಟೈನ್: `ಬೆಂಗಳೂರಿನ ಮಿನಿಸ್ಟರ್ ಕ್ವಾಟರ್ಸ್‍ನಲ್ಲಿ ನನ್ನ ಸಂಬಂಧಿಕರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿದ್ದು, ನಾನು ಅವರ ಜೊತೆ ಸಂಪರ್ಕದಲ್ಲಿ ಇದ್ದ ನಾನು ಹಾವೇರಿ ಜಿಲ್ಲೆ ಹಿರೇಕೇರೂರಿನ ಮನೆಯಲ್ಲಿ ಕ್ವಾರಂಟೈನ್ ಆಗುತ್ತಿದ್ದು, ನನ್ನ ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗದವರು ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದಾರೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ನನ್ನ ಸಂಪುಟ ಸಹೋದ್ಯೋಗಿಗಳೂ ಹಾಗೂ ನನ್ನ ಆತ್ಮೀಯರು ಆಗಿರುವ ಸಚಿವ ಸಿ.ಟಿ.ರವಿ ಅವರು ಆದಷ್ಟು ಬೇಗ ಕೊರೋನ ಸೋಂಕಿನಿಂದ ಪೂರ್ಣ ಗುಣಮುಖರಾಗಲಿ, ಮತ್ತೆ ಎಂದಿನಂತೆ ತಮ್ಮ ಕೆಲಸ-ಕಾರ್ಯಗಳಲ್ಲಿ ನಿರತರಾಗಲಿ ಎಂದು ಹಾರೈಸುತ್ತೇನೆ'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News