ಪ.ಬಂಗಾಳ ಬಿಜೆಪಿ ಶಾಸಕನ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Update: 2020-07-13 14:04 GMT

ಬೆಂಗಳೂರು, ಜು.13: ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಾಸಕ ದೇಬೇಂದ್ರ ನಾಥ್ ರಾಯ್ ಅವರು ಮನೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಬೇಕು ಮತ್ತು ಈ ಘಟನೆ ಕೊಲೆಯಾಗಿದ್ದರೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಹಿತೈಷಿಗಳಿಗೆ ನನ್ನ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಇಂದು ಬೆಳಗ್ಗಿನ ಜಾವ ಮಾರುಕಟ್ಟೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ಹತ್ಯೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಲವು ಜನರು ರಾತ್ರಿ 1 ಗಂಟೆಗೆ ಸುಮಾರಿಗೆ ನಮ್ಮ ಮನೆಗೆ ಬಂದು ರಾಯ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

"ಬಂಗಾಳದಲ್ಲಿ ಬಿಜೆಪಿಯ ನಾಯಕರ ಕೊಲೆಗೆ ಅಂತ್ಯವಿಲ್ಲವಾಗಿದೆ. ಟಿಎಂಸಿಯನ್ನು ತ್ಯಜಿಸಿದ್ದ ಬಿಜೆಪಿ ಶಾಸಕನನ್ನು ಕೊಲೆ ಮಾಡಲಾಗಿದೆ. ಅವರು ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಹೀಗೆ ಮಾಡಲಾಗಿದೆಯೇ?'' ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News