ಮಳೆ-ಪ್ರವಾಹ ಪರಿಸ್ಥಿತಿ: ಜನರ ಸ್ಥಳಾಂತರಕ್ಕೆ ಆಸ್ಥೆ ವಹಿಸಲು ಯಡಿಯೂರಪ್ಪ ಸೂಚನೆ

Update: 2020-07-13 15:25 GMT

ಬೆಂಗಳೂರು, ಜು. 13: ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಮಹಾರಾಷ್ಟ್ರದ ಗಡಿ ಜಿಲ್ಲೆಗಳು ಸೇರಿದಂತೆ ಹೆಚ್ಚು ಮಳೆಯಾಗುತ್ತಿರುವ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವಂತಿದ್ದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಸಂಬಂಧ ಮೊದಲೇ ಸ್ಥಳ ಗುರುತಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣ, ಕೃಷಿ ಚಟುವಟಿಕೆ, ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಹರಿದುಬರುವ ನೀರಿನ ಪ್ರಮಾಣದ ಕುರಿತು ಜಾಗೃತರಾಗಿರುವಂತೆ ತಿಳಿಸಿದರು.

ಅಲ್ಲದೆ, ರಾಜಾಪೂರ ಬ್ಯಾರೇಜಿನಲ್ಲಿ ರಾಜ್ಯದ ಇಂಜಿನಿಯರ್ ಒಬ್ಬರನ್ನು ನಿಯೋಜಿಸುವಂತೆ ಸೂಚಿಸಲಾಯಿತು. ಅಕ್ಟೋಬರ್ ವರೆಗೆ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಪ್ರವಾಹ ಕುರಿತು ಎಚ್ಚರ ವಹಿಸಿ. ಮಣ್ಣಿನ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಯಾವುದೇ ಬೆಳೆಹಾನಿಯಾಗದಂತೆ ಅಧಿಕಾರಿಗಳು ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.

ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬಂಪರ್ ಬೆಳೆ ಬರುವ ಸಾಧ್ಯತೆ ಇದ್ದು, ಬೇಡಿಕೆ ಕಡಿಮೆ ಇರುವ ಕಾರಣ ಗೋದಾಮುಗಳನ್ನು ಗುರುತಿಸಿ, ಕೃಷಿ ಉತ್ಪನ್ನ ದಾಸ್ತಾನಿಗೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಸುಧಾಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News