ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ

Update: 2020-07-13 17:10 GMT

ಬೆಂಗಳೂರು, ಜು. 13: ವಿರೋಧ ಪಕ್ಷಗಳು, ಕೃಷಿ ತಜ್ಞರ ಹಾಗೂ ರೈತ ಸಂಘಟನೆಗಳ ತೀವ್ರ ವಿರೋಧಕ್ಕೆ ಕಾರಣವಾಗಿರುವ ವಿವಾದಿತ 'ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961'ರ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕುವ ಮೂಲಕ ಒಪ್ಪಿಗೆ ನೀಡಿದ್ದು, ಸೋಮವಾರ ಅಧಿಕೃತವಾಗಿ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ.

ಕೃಷಿಯೇತರ ಆದಾಯ ಹೊಂದಿರುವವರು ಕೃಷಿ ಭೂಮಿಯನ್ನು ಖರೀದಿಸಲು ಇದ್ದ ನಿರ್ಬಂಧ ತೆರವುಗೊಳಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಬಳಿಕ ಕಾಯ್ದೆಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರ ಅಂಕಿತಕ್ಕೆ ರಾಜ್ಯ ಸರಕಾರ ರವಾನಿಸಿತ್ತು.

1961ರ ಕಾಯ್ದೆಯ ಕಲಂ 79 'ಎ' ಮತ್ತು 79 `ಬಿ'ಗೆ ತಿದ್ದುಪಡಿ ಮಾಡಲಾಗಿದೆ. ಕಾಯ್ದೆ ತಿದ್ದುಪಡಿಯಿಂದ 'ಕೃಷಿಗೆ ಉತ್ತೇಜನ ಸಿಗಲಿದೆ' ಎಂದು ರಾಜ್ಯ ಸರಕಾರ ಸಮರ್ಥನೆ ನೀಡಿತ್ತು. ಕೃಷಿಯೇತರ ಆದಾಯ ಇರುವವರು ಮಳೆ ಆಶ್ರಿತ ಗರಿಷ್ಟ 108 ಎಕರೆ ಭೂಮಿ ಖರೀದಿಯನ್ನು ಖರೀದಿಬಹುದು, ನೀರಾವರಿ ಅಥವಾ ತೋಟಗಾರಿಕೆ ಭೂಮಿಯಾಗಿದ್ದರೆ 54 ಎಕರೆಗಳಷ್ಟು ಖರೀದಿಸಬಹುದು ಎಂಬ ಷರತ್ತು ವಿಧಿಸಲಾಗಿದೆ.

ಮಳೆಯ ಕಣ್ಣಾಮುಚ್ಚಾಲೆ ಹಿನ್ನೆಲೆಯಲ್ಲಿ ಕೃಷಿಯಿಂದ ಈಗಾಗಲೇ ವಿಮುಖರಾಗಿರುವ ಕೃಷಿಕರನ್ನು ಬೀದಿಪಾಲು ಮಾಡಲು ಈ ಕಾಯ್ದೆ ಅವಕಾಶ ಕಲ್ಪಿಸಲಿದೆ. ಉಳ್ಳವರಿಗೆ ಕೃಷಿ ಭೂಮಿ ಖರೀದಿಸಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆಕ್ಷೇವ ವ್ಯಕ್ತವಾಗಿದೆ. ಇದರಿಂದ ಉದ್ಯಮಿಗಳು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಹಾಗೂ ಕಾರ್ಪೋರೆಟ್ ಕಂಪೆನಿಗಳ ಮಾಲಕರಿಗೆ ಅನುಕೂಲವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News