ಕೋವಿಡ್ ಚಿಕಿತ್ಸೆಗೆ ಇಟೊಲಿಝುಮ್ಯಾಬ್ ಚುಚ್ಚುಮದ್ದು ಸಹಕಾರಿ: ಬಯೋಕಾನ್

Update: 2020-07-13 17:24 GMT

ಬೆಂಗಳೂರು, ಜು.13: ಕೋವಿಡ್-19 ಸೋಂಕಿತ ರೋಗಿಗಳು ಎದುರಿಸುತ್ತಿರುವ ಉಸಿರಾಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿರುವ ಜೈವಿಕ ಮೂಲದ ಇಟೊಲಿಝುಮ್ಯಾಬ್ ಎಂಬ ಚುಚ್ಚು ಮದ್ದನ್ನು ಶೀಘ್ರದಲ್ಲೆ ಬಿಡುಗಡೆ ಮಾಡುವುದಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಬಯೋಕಾನ್ ತಿಳಿಸಿದೆ.

ಈ ಚುಚ್ಚುಮದ್ದಿನ ಪ್ರತಿ ಸೀಸೆಗೆ ಸುಮಾರು ಎಂಟು ಸಾವಿರ ರೂ.ದರ ನಿಗದಿಯಾಗುವ ಸಾಧ್ಯತೆಯಿದೆ. 25 ಎಂಜಿ/5 ಎಂಎಲ್ ಪ್ರಮಾಣದ ಈ ಚುಚ್ಚುಮದ್ದು ಮಾರಾಟಕ್ಕೆ ಭಾರತದ ಪ್ರಧಾನ ಔಷಧಿ ನಿಯಂತ್ರಕ(ಡಿಸಿಜಿಐ) ಬಯೋಕಾನ್ ಅನುಮತಿ ಪಡೆದಿದೆ.

ಇಟೊಲಿಝುಮ್ಯಾಬ್ ಚುಚ್ಚುಮದ್ದು ಇಡೀ ವಿಶ್ವದಲ್ಲಿ ಕೋವಿಡ್-19 ಸಂಬಂಧಿತ ಚಿಕಿತ್ಸೆಗಾಗಿ ಬಳಕೆ ಮಾಡಲು ಅನುಮತಿ ಪಡೆದಿರುವ ಏಕೈಕ ಜೈವಿಕ ಮೂಲಕ ಔಷಧಿ ಇದಾಗಿದೆ ಎಂದು ಬಯೋಕಾನ್ ಸಂಸ್ಥೆ ಪ್ರತಿಪಾದಿಸಿದೆ.

ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಸಿದ್ಧವಾಗುವವರೆಗೆ ಜೀವವನ್ನು ರಕ್ಷಿಸುವಂತಹ ಔಷಧಿಗಳ ಅಗತ್ಯವಿದೆ. ಈ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಜಗತ್ತಿನಲ್ಲಿ ಈಗ ಲಭ್ಯವಿರುವ ಔಷಧಿಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಹುಡುಕಾಟ ಅಥವಾ ಹೊಸದಾದ ಔಷಧಿಗಳನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಬಯೋಕಾನ್ ಪಾರ್ಕ್ ನಲ್ಲೆ ಈ ಚುಚ್ಚುಮದ್ದು ತಯಾರಿಸಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ಸಾಲಿನ ಆರಂಭದಲ್ಲಿ ನಮಗೆ ಈ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ. ಆದರೆ, ಸೋಂಕು ಮತ್ತೆ ಹರಡುವುದಿಲ್ಲ ಎಂದು ಖಾತರಿ ಇಲ್ಲ. ಆದುದರಿಂದ, ಯಾವುದೆ ಬಗೆಯ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

ಆರಂಭಿಕವಾಗಿ ಈ ಚುಚ್ಚು ಮದ್ದಿನ ಒಂದು ಸೀಸೆಗೆ 7950 ರೂ ನಿಗದಿ ಪಡಿಸಲಾಗಿದ್ದು, ಒಬ್ಬ ರೋಗಿಗೆ ಗರಿಷ್ಠ 4 ಸೀಸೆಗಳ ಚುಚ್ಚುಮದ್ದು ಬಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅದರಂತೆ, ಒಬ್ಬ ರೋಗಿಗೆ 32 ಸಾವಿರ ರೂ. ಈ ಸೀಸೆಗೆ ವೆಚ್ಚವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News