ಲಾಕ್‍ಡೌನ್‍ನಿಂದ ಆರ್ಥಿಕ ಕುಸಿತ: ಎಫ್‍ಕೆಸಿಸಿಐ ಅಧ್ಯಕ್ಷ ಜನಾರ್ಧನ ಆತಂಕ

Update: 2020-07-13 17:28 GMT

ಬೆಂಗಳೂರು, ಜು.13: ಕೊರೋನ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಜು.14ರ ರಾತ್ರಿ 8ಗಂಟೆಯಿಂದ ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಿದ್ದು, ಇದರಿಂದ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಮತ್ತಷ್ಟು ಆರ್ಥಿಕ ಕುಸಿತ ಕಾಣಲಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ 54 ದಿನ ಲಾಕ್‍ಡೌನ್ ಮುಗಿದ ಬಳಿಕ ಮತ್ತೆ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಜಾರಿ ಮಾಡಲ್ಲ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಮತ್ತೆ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಿಸುವ ಮೂಲಕ ಕೈಗಾರಿಕೆ, ಉದ್ಯಮ ಕ್ಷೇತ್ರ ನಶಿಸುವಂತೆ ಹಾಗೂ ಕಾರ್ಮಿಕರು ಬೀದಿ ಪಾಲಾಗುವಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾರಿಕೆಗಳಲ್ಲಿ ಕೊರೋನ ವೈರಸ್ ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕೈಗಾರಿಕೆ ಕ್ಷೇತ್ರದಲ್ಲಿ ಯಾವುದೇ ಸೋಂಕು ಕೂಡ ಕಂಡು ಬಂದಿಲ್ಲ. ಅಲ್ಲದೆ, ಕೈಗಾರಿಕಾ ವಲಯ ರಾಜ್ಯದ ಜಿಎಸ್‍ಡಿಪಿಗೆ ಸುಮಾರು ಶೇ.26ರಷ್ಟು ಕೊಡುಗೆ ನೀಡಿದೆ. ಕೈಗಾರಿಕೆಗಳು, ಉದ್ಯಮ ಮುಚ್ಚಿದರೆ ಉದ್ಯೋಗ ನಷ್ಟಕ್ಕೆ ಕಾರಣವಾಗಿ ಜಿಎಸ್‍ಟಿ ಸಂಗ್ರಹಕ್ಕೆ ಧಕ್ಕೆ ತರಲಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಕೊರೋನ ವೈರಸ್ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡುತ್ತಿದ್ದರೂ ಆ ರಾಜ್ಯಗಳಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಕರ್ನಾಟಕದಲ್ಲಿ ನಿರ್ಬಂಧ ಹೇರಬೇಡಿ ಎಂದು ಸಿಎಂ ಅವರಲ್ಲಿ ಮನವಿ ಮಾಡಿದ್ದರೂ ಲಾಕ್‍ಡೌನ್ ಜಾರಿಗೊಳಿಸಿ ನಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರ ಘೋಷಿಸಿರುವ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಶೇ.65ರಷ್ಟು ಈಗಾಗಲೇ ವಿತರಣೆಯಾಗಿದೆ. ಈ ಪ್ಯಾಕೇಜ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಲಾಕ್‍ಡೌನ್ ಜಾರಿ ಮಾಡಿದರೆ ಕೈಗಾರಿಕೋದ್ಯಮಕ್ಕೆ ಭಾರೀ ಹೊಡೆತ ಬೀಳಲಿದ್ದು, ಬಂಡವಾಳ ಹೂಡಿಕೆಗೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲಾಕ್‍ಡೌನ್ ಜಾರಿಗೂ ಮುನ್ನ ಕೈಗಾರಿಕಾ ಸಂಸ್ಥೆಗಳೊಡನೆ ಕೂಲಂಕುಷವಾಗಿ ಪರಾಮರ್ಶಿಸಿ. ಕೋವಿಡ್ ಸಮಿತಿ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಯಾವುದೇ ಕಾರಣಕ್ಕೂ ಕೈಗಾರಿಕೆಗಳನ್ನು ಲಾಕ್‍ಡೌನ್ ವ್ಯಾಪ್ತಿಗೆ ತರಬಾರದೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News