'ಕೋವಿಡ್ ಕೇಂದ್ರಗಳಲ್ಲಿ ಎಲ್ಲಾ ಅವರೇ ಸ್ವಾಮಿ, ಏನ್ ಮಾಡೋದು' ಎಂದ ಸಚಿವ ವಿ.ಸೋಮಣ್ಣ

Update: 2020-07-14 14:26 GMT

ತುಮಕೂರು, ಜು.14: ಬೆಂಗಳೂರು ಕೋವಿಡ್ ಕೇಂದ್ರಗಳಲ್ಲಿ ಎಲ್ಲಾ ಅವರೇ ಸ್ವಾಮಿ, ಏನ್ ಮಾಡೋದು, ಎಲ್ಲಿ ನೋಡಿದ್ರೂ ಗಿಜಿಗಿಜಿ ಅಂತಾರೆ ಎಂದು ಕೊರೋನ ರೋಗಿಗಳ ಕುರಿತು ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಮಾಜಿ ಸಚಿವ ಸೊಗಡು ಶಿವಣ್ಣ ‘ಕುರಿಮಂದೆ ಇದ್ದಂಗೆ ಇದಾರೆ ಸ್ವಾಮೀಜಿ, ಎಲ್ಲಿ ನೋಡಿದ್ರೂ ಅವರೆ’ ಎಂದು ಸಚಿವರ ಮಾತಿಗೆ ದನಿಗೂಡಿಸಿದ್ದಾರೆ.

ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸ್ವಾಮೀಜಿಯವರಿಗೆ ಬೆಂಗಳೂರಿನ ಸ್ಥಿತಿಗತಿ ವಿವರಿಸಿದ ಸಚಿವರು, ಬೆಂಗಳೂರಿನ 53 ವಾರ್ಡ್ ‌ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. 24x7 ಸಹಾಯವಾಣಿ, ಆಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು. ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ‘ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ' ಎಂದಿದ್ದಾರೆ. ಇದಕ್ಕೆ ಸಚಿವ ಸೋಮಣ್ಣ ‘ಎಲ್ಲಾ ಅವರೇ, ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ’ ಎಂದು ಹೇಳಿದ್ದಾರೆ.

ಆ್ಯಂಬುಲೆನ್ಸ್ ನವರು ಕೋವಿಡ್ ಸೋಂಕಿತರನ್ನು ಕರೆತರಲು 3,000 ರೂಪಾಯಿ ಕೊಟ್ಟರೆ ಹೋಗುತ್ತಾರೆ. ಇಲ್ಲದಿದ್ದರೆ ಹೋಗೋದೇ ಇಲ್ಲ. ಹಾಗಾಗಿ ನಾವು ದೊಡ್ಡ ಆಸ್ಪತ್ರೆಗಳಲ್ಲಿ 4,500 ರೂಪಾಯಿ ಫಿಕ್ಸ್ ಮಾಡಿದ್ದೇವೆ ಎಂದು ಸಚಿವ ಸೋಮಣ್ಣ ಹೇಳಿದರು.

ಪ್ರತಿ ವಾರ್ಡ್‌ ನಲ್ಲಿರುವ ಕೌಂಟರ್‌ ಗೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದೇನೆ. ಅವರು ಆಯಾ ವಾರ್ಡ್ ‌ಮಾತ್ರ ನೋಡಿಕೊಳ್ಳುತ್ತಾರೆ. ಹೀಗಾಗಿ ಸೋಂಕು ಕಂಟ್ರೋಲ್ ಗೆ ಬಂದಿದೆ ಎಂದು ವಿವರಿಸಿದ್ದಾರೆ. ನಿನ್ನೆ ಮಾಜಿ ಸಚಿವ ಜಾರ್ಜ್, ಕಾಂಗ್ರೆಸ್ ಶಾಸಕ ಹಾರೀಸ್, ರಿಝ್ವಾನ್ ಅರ್ಶದ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಸೋಂಕು ನಿಯಂತ್ರಣದ ಸಂಬಂಧ ಚರ್ಚೆ ನಡೆಸಿದ್ದೇನೆ ಎಂದು ಸೋಮಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News