ಸರಕಾರ ಅರೆಬರೆ ಮಾಹಿತಿ ನೀಡಿ ತಪ್ಪಿಸಿಕೊಳ್ಳುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-07-14 14:59 GMT

ಬೆಂಗಳೂರು, ಜು. 14: `ಕೊರೋನ ಸೋಂಕು ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು? ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ಈ ಸಂಬಂಧ ವಿವರ ಕೋರಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಕೊರೋನ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು? ಗುಣಮಟ್ಟ ಸರಿಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು? ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು? ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು?' ಎಂದು ಕೇಳಿದ್ದಾರೆ.

`ಕೊರೋನ ಸೋಂಕು ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಪಾವತಿ ಮಾಡಲಾದ ಹಣ ಎಷ್ಟು? ಕೇಂದ್ರ ಸರ್ಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು? ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು?' ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಟ್ವಟ್ಟರ್ ಮೂಲಕ ಮಾಹಿತಿ ಕೋರಿದ್ದಾರೆ.

ಕೊರೋನ ಸೋಂಕು ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು? ಹೆಚ್ಚುದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು?' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ಕೊರೋನ ಸೋಂಕಿಗೆ ಸಂಬಂಧಿಸಿದ ಆರೋಪ ಬಂದಾಗೆಲ್ಲ 'ದಾಖಲೆ ನೀಡಿ', 'ವಿಧಾನಸೌಧಕ್ಕೆ ಬನ್ನಿ' ಎಂದೆಲ್ಲ ಸವಾಲು ಹಾಕಿ ಕೆಲವು ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಸರಕಾರ ಅರೆಬರೆ ಮಾಹಿತಿ ನೀಡಿ ತಪ್ಪಿಸಿಕೊಳ್ಳುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರ್ದಿಷ್ಟ ವಿವರ ಕೇಳಿ ಪತ್ರ ಬರೆದಿದ್ದೇನೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News