ಕೆಎಸ್ಆರ್‌ಟಿಸಿ ನೌಕರರಿಗೆ ವೇತನ ರಹಿತ ರಜೆ ಕಾರ್ಮಿಕ ವಿರೋಧಿ, ಅಮಾನವೀಯ: ಸಿದ್ದರಾಮಯ್ಯ

Update: 2020-07-14 17:31 GMT

ಬೆಂಗಳೂರು, ಜು. 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ನೌಕರರಿಗೆ ಒಂದು ವರ್ಷ ವೇತನರಹಿತ ರಜೆ ನೀಡುವ ಮುಖ್ಯಮಂತ್ರಿ ಯಡಿಯೂರಪ್ಪನವರ ಆಲೋಚನೆ ಕಾರ್ಮಿಕ ವಿರೋಧಿ ಮಾತ್ರವಲ್ಲ, ಅಮಾನವೀಯ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೆಎಸ್ಸಾರ್ಟಿಸಿಯ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು ಖಾಸಗಿ ಕಂಪೆನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಕುಟುಂಬದ ಪಾಡೇನು? ರಾಜ್ಯ ಸರಕಾರ ದಿವಾಳಿಯಾಗಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜನರು ಪ್ರಯಾಣಿಸದ ಕಾರಣಕ್ಕೆ ನೌಕರರಿಗೆ ಕೆಲಸವಿಲ್ಲದೆ ಇದ್ದರೆ ಸರಕಾರ ಆಸಕ್ತ ನೌಕರರಿಗೆ ಇತರೆ ಕೆಲಸ ನೀಡುವ ಮೂಲಕ ಇವರ ಸೇವೆಯನ್ನು ಸಮರ್ಥವಾಗಿ ಪಡೆದುಕೊಳ್ಳಲು ಯೋಜಿಸಬೇಕು. ಇದರ ಹೊರತಾಗಿ ಸಂಬಳವನ್ನೇ ನೀಡುವುದಿಲ್ಲ ಎಂಬುದು ಕ್ರೌರ್ಯದ ಪರಮಾವಧಿಯಾಗುತ್ತದೆ. ಹೀಗಾಗಿ ಸರಕಾರ ವೇತನ ರಹಿತ ಮತ್ತು ಭತ್ಯೆ ರಹಿತ ರಜೆ ನೀಡಬೇಕೆಂಬ ಆಲೋಚನೆಯನ್ನು ಕೂಡಲೇ ಕೈಬಿಡಬೇಕು. ನೌಕರರಿಗೆ ಸಮರ್ಪಕ ಸಂಬಳ ನೀಡುವ ಮೂಲಕ ಅವರ ಕುಟುಂಬದ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News