ಜು.15 ರಿಂದ 24ರ ವರೆಗೆ ಧಾರವಾಡ ಜಿಲ್ಲೆ ಲಾಕ್‍ಡೌನ್: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

Update: 2020-07-14 17:40 GMT

ಧಾರವಾಡ, ಜು.14: ಜುಲೈ 15 ರಿಂದ 24ರ ವರೆಗೆ ಜಿಲ್ಲೆಯಲ್ಲಿ ಜಾರಿ ಮಾಡಿರುವ ಲಾಕ್‍ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರು ಲಾಕ್‍ಡೌನ್ ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್‍ಡೌನ್ ಸಮಯದಲ್ಲಿ ಅನಗತ್ಯವಾಗಿ ಅಡ್ಡಾಡುವುದು, ಖಾಸಗಿ ವಾಹನ ಸಂಚಾರ, ಜಿಲ್ಲೆಯ ಹೊರಗಡೆ ಪ್ರಯಾಣ ಮತ್ತು ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವುದನ್ನು (ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸದೇ) ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ಲಾಕ್‍ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಅಗತ್ಯ ಸೇವೆ, ಸರಕು ಮತ್ತು ವಹಿವಾಟುಗಳಿಗೆ ನಿರ್ದಿಷ್ಟ ಸಮಯವನ್ನು ನಿಗದಿಗೊಳಿಸಲಾಗಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಎಲ್ಲ ಕಿರಾಣಿ, ದಿನಸಿ, ಹಾಲು, ತರಕಾರಿ, ಹಣ್ಣು, ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಕೃಷಿ, ತೋಟಗಾರಿಕೆ ಸಂಬಂಧಿಸಿದಂತೆ ಎಲ್ಲ ಬೀಜ, ರಸಗೊಬ್ಬರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಪೂರಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಪ್ರತಿ ಸ್ಥಳದಲ್ಲಿ ಜನರು ಮಾಸ್ಕ್, ಸ್ಯಾನಿಟೈಸರ್ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ. ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ವೈದ್ಯಕೀಯ ಸಂಬಂಧಿಸಿದಂತೆ ಆಸ್ಪತ್ರೆ, ಔಷಧ ಅಂಗಡಿಗಳು ದಿನನಿತ್ಯದಂತೆ ಕಾರ್ಯನಿರ್ವಹಿಸಲಿವೆ. ಲಾಕ್‍ಡೌನ್ ಸಮಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಬಸ್‍ಗಳ ಸಾರಿಗೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಆಟೋ, ಕ್ಯಾಬ್ ಸೇರಿದಂತೆ ಇತರೆ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳನ್ನು ಜು.24ರ ವರೆಗೆ ಮುಚ್ಚಲು ಆದೇಶಿಸಲಾಗಿದೆ. ಯಾವುದೇ ರೀತಿಯ ಗುಂಪು ಸೇರುವುದು, ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ ಎಂದು ನಿತೇಶ್ ಪಾಟೀಲ್ ಹೇಳಿದರು.

65 ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮನೆಯಿಂದ ಹೊರಗಡೆ ಬರದಂತೆ ಮನವಿ ಮಾಡಿದ ಜಿಲ್ಲಾಧಿಕಾರಿ, ಯಾವುದೇ ವಸ್ತುಗಳನ್ನು ಖರೀದಿಸಲು ಒಂದು ಕುಟುಂಬದಿಂದ ಒಬ್ಬರೇ ಬಂದರೆ ಸಾಕು. ಉಳಿದವರು ಸುರಕ್ಷಿತವಾಗಿ ಮನೆಯಲ್ಲೇ ಇರಲಿ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಕುಟುಂಬಗಳಲ್ಲಿ ಕೊರೋನ ವೈರಸ್ ಕಂಡು ಬರುತ್ತಿರುವುದರಿಂದ ಲಾಕ್‍ಡೌನ್ ಸಮಯದಲ್ಲಿ ಸದಸ್ಯರು ಮನೆಯಲ್ಲಿಯೇ ಒಟ್ಟಾಗಿರುವುದರಿಂದ ಜಾಗೃತೆ ವಹಿಸಬೇಕು. ಪರಸ್ಪರ ಸುರಕ್ಷಿತ ಅಂತರ ಕಾಪಾಡಿಕೊಂಡು, ಮಾಸ್ಕ್ ಬಳಸಬೇಕು. ದಿನನಿತ್ಯದ ವಸ್ತುಗಳನ್ನು ಪ್ರತ್ಯೇಕವಾಗಿ ಬಳಸುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News