ಕಂಟೈನ್ಮೆಂಟ್ ವಲಯಗಳಲ್ಲಿ ಆಹಾರ ಕಿಟ್ ವಿತರಣೆ: ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2020-07-14 17:52 GMT

ಬೆಂಗಳೂರು, ಜು.14: ನಗರದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಅಲ್ಲಿ ಬಡವರಿಗೆ ಆಹಾರ ಕಿಟ್ ತಲುಪಿಸಿರುವ ಬಗ್ಗೆ ಜು.16ರಂದು ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಬಿಬಿಎಂಪಿ ಆಯುಕ್ತ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಅಗತ್ಯ ಇರುವವರಿಗೆ ಏಕೆ ಆಹಾರ ಪೂರೈಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆಹಾರ ಅಗತ್ಯವಿರುವ 9 ಸಾವಿರ ಮಂದಿಯನ್ನು ಗುರುತಿಸಿದ್ದೇವೆ. ಇನ್ನು ಮುಂದೆ ಅವರಿಗೆ ಉಚಿತವಾಗಿ ಆಹಾರ ಸಾಮಗ್ರಿ ಪೂರೈಕೆ ಮಾಡಲಾಗುತ್ತದೆ ಎಂದು ಪೀಠಕ್ಕೆ ಮೌಖಿಕವಾಗಿ ಹೇಳಿಕೆ ನೀಡಿದರು.

ಈ ಹೇಳಿಕೆಗಳ ಬಗ್ಗೆ ಜು.16ರಂದು ಲಿಖಿತವಾಗಿ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. 

ಖುದ್ದು ಹಾಜರಿಗೆ ಸೂಚಿಸಿದ್ದ ನ್ಯಾಯಪೀಠ: ನಗರದ ಕಂಟೈನ್ಮೆಂಟ್ ವಲಯದಲ್ಲಿ ಬಡ ಜನರಿಗೆ ರೇಷನ್ ನೀಡಲು ತನಗೆ ಸಾಧ್ಯವಿಲ್ಲ ಎಂದು ಬಿಬಿಎಂಪಿ ಹೇಳಿಕೆ ನೀಡಿದ ಸಂದರ್ಭದಲ್ಲಿ ರಾಜ್ಯ ಸರಕಾರ ತನ್ನ ಆಡಳಿತ ಯಂತ್ರ ಉಪಯೋಗಿಸಿ ಕಂಟೈನ್ಮೆಂಟ್ ವಲಯದ ಜನರಿಗೆ ಆಹಾರ ಸಾಮಗ್ರಿ ನೀಡಬೇಕು. ಎಸ್‍ಒಪಿ ಅನುಷ್ಠಾನ ಮಾಡಬೇಕೆಂದು ನ್ಯಾಯಪೀಠ ಸೂಚನೆ ನೀಡಿತ್ತು.

ಈ ಬಗ್ಗೆ ಸರಕಾರ ಇಲ್ಲಿಯವರೆಗೆ ಯಾವುದೇ ಉತ್ತರ ನೀಡಿರಲಿಲ್ಲ. ಸರಕಾರ ಕೋರ್ಟ್ ಆದೇಶಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ, ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರು ಜು.14ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರನೆಗೆ ಖುದ್ದು ಹಾಜರಿರಬೇಕೆಂದು ನ್ಯಾಯಪೀಠವು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News