ತಂಬಾಕು ಉತ್ಪನ್ನಗಳ ಮೇಲೆ ದಾಳಿ: 2.43 ಕೋಟಿ ರೂ. ತೆರಿಗೆ ಮತ್ತು ದಂಡ

Update: 2020-07-14 17:53 GMT

ಬೆಂಗಳೂರು, ಜು. 14: ವಾಣಿಜ್ಯ ತೆರಿಗೆಗಳ ಇಲಾಖೆಯು ಜೂನ್ ಹಾಗೂ ಜುಲೈ 10ರ ವರೆಗೆ ರಸ್ತೆ ಜಾಗೃತಿ ಮತ್ತು ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಗಳ ಅಘೋಷಿತ ಗೋದಾಮುಗಳ ಮೇಲೆ ದಾಳಿ ನಡೆಸಿ, 2.43 ಕೋಟಿ ರೂ. ತೆರಿಗೆ ಮತ್ತು ದಂಡವನ್ನು ವಿಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತ ಎಂ.ಎಸ್.ಶ್ರೀಕರ್ ತಿಳಿಸಿದ್ದಾರೆ.

ಅಧಿಕಾರಿಗಳು ರಾಜ್ಯಾದ್ಯಂತ ರಸ್ತೆ ಜಾಗೃತಿ ಚಟುವಟಿಕೆಗಳನ್ನು ನಿರ್ವಹಿಸುವಾಗ ಸರಿಯಾದ ದಾಖಲೆಗಳಿಲ್ಲದೆ, ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುತ್ತಿದ್ದ ಪಾನ್ ಮಸಾಲ ಮತ್ತು ತಂಬಾಕು ಉತ್ಪನ್ನಗಳ ವಾಹನಗಳ ತಪಾಸಣೆ ನಡೆಸಿ ಕಾನೂನಿನನ್ವಯ ತೆರಿಗೆ ಮತ್ತು ದಂಡ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಾಗೃತಿ ಮತ್ತು ದಕ್ಷಿಣ ವಲಯ (ಜಾರಿ) ಬೆಂಗಳೂರು ವಿಭಾಗಗಳ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಗಣಿಯಲ್ಲಿ ತಂಬಾಕು ಉತ್ಪನ್ನಗಳನ್ನು ಅನಧಿಕೃತವಾಗಿ ಸಮಗ್ರಹಿಸಿದ ಅಘೋಷಿತ ಗೋದಾಮುಗಳ ಮೇಲೆ ದಾಳಿ ನಡೆಸಿ, ದಾಖಲೆಗಳಿಲ್ಲದೆ ಸಂಗ್ರಹಿಸಲಾದ ತಂಬಾಕು ಉತ್ಪನ್ನಗಳ ಮೇಲೆ 56.04 ಲಕ್ಷ ರೂ.ಗಳ ತೆರಿಗೆ ಮತ್ತು ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆಗಳ ಇಲಾಖೆಯು ಪಾನ್ ಮಸಾಲ ಮತ್ತು ಇತರೆ ತಂಬಾಕು ಉತ್ಪನ್ನಗಳ ಸಾಗಾಣಿಕೆಯ ಮೇಲೆ ನಿಗಾವಹಿಸಿದ್ದು, ಸರಕು ಮತ್ತು ಸೇವೆಗಳ  ತೆರಿಗೆ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದರ ಜೊತೆಗೆ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News