ದ್ವಿತೀಯ ಪಿಯು: ಶೇ.79.11 ಫಲಿತಾಂಶದೊಂದಿಗೆ ಚಿಕ್ಕಮಗಳೂರಿಗೆ ರಾಜ್ಯದಲ್ಲಿ 4ನೇ ಸ್ಥಾನ

Update: 2020-07-14 18:08 GMT
ರುಮಿಯಾ ತಬ್ಸುಮ್
 

ಚಿಕ್ಕಮಗಳೂರು, ಜು.14: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಕಾಫಿನಾಡು ಈ ಬಾರಿ ಶೇ.79.11 ಫಲಿತಾಂಶದೊಂದಿಗೆ ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲೇ 4ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಶೈಕ್ಷಣಿಕ ಸಾಧನೆ ತೋರಿದೆ. ಸೇಂಟ್ ಮೇರಿಸ್ ಕಾಲೇಜಿನ ರುಮಿಯಾ ತಬ್ಸುಮ್ ವಾಣಿಜ್ಯ ವಿಭಾಗದಲ್ಲಿ 590 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿಯ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಜಿಲ್ಲೆಯ 8,221 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6504 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.79.11 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 8220 ವಿದ್ಯಾರ್ಥಿಗಳ ಪೈಕಿ 5135 ಹುಡುಗಿಯರು ಪರೀಕ್ಷೆ ಎದುರಿಸಿದ್ದು, 4055 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 4352 ಹುಡುಗರ ಪೈಕಿ 2883 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಎಂದಿನಂತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. 

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ 2027 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 1602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 6194 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 4902 ವಿದಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ.79.03 ಫಲಿತಾಂಶ ಬಂದಿದ್ದರೆ, ನಗರದ ಪ್ರದೇಶದಲ್ಲಿ ಶೇ.79.14 ಫಲಿತಾಂಶ ಪಡೆಯುವ ಮೂಲಕ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಿಂದ ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಕಲಾ ವಿಭಾಗದಲ್ಲಿ 2667 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 1749 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.65.58 ಫಲಿತಾಂಶ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2330 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ 2057 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.88.28 ಸಾಧನೆ ತೋರಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ 3224 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ 2698 ವಿದ್ಯಾರ್ಥಿಗಳು ಪಾಸಾಗುವ ಮೂಲಕ 83.68 ಸಾಧನೆ ಮೆರೆದಿದ್ದಾರೆ.

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಕಲಾ ವಿಭಾಗದಲ್ಲಿ ಕಡೂರು ತಾಲೂಕಿನ ಯಗಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಸಂತ್ ಬಿ.ಎಸ್ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದು, ಈ ವಿದ್ಯಾರ್ಥಿ 561 ಅಂಕ ಪಡೆಯುವ ಮೂಲಕ ಶೇ.93.5 ಫಲಿತಾಂಶದ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಸೆಂಟ್ ಮೇರಿಸ್ ಕಾಲೇಜಿನ ರುಮಯ್ಯಾ ತಬ್ಸುಮ್ ವಾಣಿಜ್ಯ ವಿಭಾಗದಲ್ಲಿ 590 ಅಂಕಗಳೊಂದಿಗೆ ಶೇ.98.01 ಫಲಿತಾಂಶ ಗಳಿಸಿದ್ದು, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ ಸಾಯಿ ಏಂಜಲ್ಸ್ ಕಾಲೇಜಿನ ನೇಹಾ ಸಿ.ಎನ್. 588 ಅಂಕಗಳೊಂದಿಗೆ ಶೇ.98 ಫಲಿತಾಂಶ ಪಡೆದಿದ್ದು, ಇವರು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯಾಗಿದ್ದಾರೆ.

ಚಿಕ್ಕಮಗಳೂರು ನಗರದ ಸೆಂಟ್ ಮೇರಿಸ್ ಕಾಲೇಜಿನ ರುಮಿಯಾ ತಬ್ಸುಮ್ ವಾಣಿಜ್ಯ ವಿಭಾಗದಲ್ಲಿ 590 ಅಂಕಗಳೊಂದಿಗೆ ಶೇ.98.01 ಫಲಿತಾಂಶ ಗಳಿಸಿದ್ದು, ಈ ವಿದ್ಯಾರ್ಥಿನಿ ಮೂರು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿಯೇ ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಜಿಲ್ಲೆಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಉತ್ತಮ ಅಂಕಗಳೊಂದಿಗೆ ಸಾಧನೆ ಮಾಡುವ ನಿರೀಕ್ಷೆ ಇತ್ತು. ಆದರೆ ಇಡೀ ಜಿಲ್ಲೆಗೆ ನಾನೇ ಟಾಪರ್ ಆಗುತ್ತೆನೆಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಈ ಸಾಧನೆಗೆ ಪೋಷಕರು ಮತ್ತು ನಾನು ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆ ಉಪನ್ಯಾಸಕರು, ಪ್ರಾಶುಂಪಾಲರ ಸಹಕಾರ, ಸಲಹೆಯೇ ಕಾರಣವಾಗಿದೆ. ಕಾಲೇಜಿನಲ್ಲಿ ಉಪನ್ಯಾಸಕರು ಏನೇ ಸಮಸ್ಯೆ ಕೇಳಿದರೂ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದರು. ಪಠ್ಯವನ್ನು ಕಷ್ಟ ಪಟ್ಟು ಓದದೇ ಇಷ್ಟ ಪಟ್ಟು ಓದಿದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು. ನಾನು ಪಠ್ಯವನ್ನು ಇಷ್ಟಪಟ್ಟು ಓದಿದ್ದರಿಂದ ಟಾಪರ್ ಆಗಲು ಸಾಧ್ಯವಾಗಿದೆ ಎಂದು ಅನಿಸುತ್ತಿದೆ.
- ರುಮಿಯಾ, ತಬ್ಸುಮ್, ಜಿಲ್ಲೆಯ ಟಾಪರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News