ಪಿಯುಸಿ ಫಲಿತಾಂಶ ಕುಸಿತಕ್ಕೆ ಸಚಿವ ಸುರೇಶ್ ಕುಮಾರ್ ಹೊಣೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-07-15 12:04 GMT

ಬೆಂಗಳೂರು, ಜು. 15: ದ್ವಿತಿಯ ಪಿಯುಸಿ ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆಯೂ ಕಾರಣ ಎನ್ನುವುದು ಸತ್ಯ. ಇದರ ಹೊಣೆಯನ್ನು ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರೇ ವಹಿಸಬೇಕಾಗುತ್ತದೆ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಪಿಯುಸಿ ಉಪನ್ಯಾಸಕರ ಹುದ್ದೆಗೆ 2018ರಲ್ಲಿ ಬರೆದಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾದ 1,298 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮವಾಗಿತ್ತು. ಆದರೆ, ಸಚಿವ ಸುರೇಶ್ ಕುಮಾರ್ ಮಧ್ಯ ಪ್ರವೇಶಿಸಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿರುವುದು ಅಭ್ಯರ್ಥಿಗಳಿಗಷ್ಟೇ ಅಲ್ಲ ವಿದ್ಯಾರ್ಥಿಗಳಿಗೂ ಮಾಡಿರುವ ಅನ್ಯಾಯ' ಎಂದು ಸಿದ್ದರಾಮಯ್ಯ ದೂರಿದ್ದಾರೆ.

ನಾಶ ಮಾಡಲು ಹೊರಟ ಸರಕಾರ: `ಕ್ಷೀರಧಾರೆ ಯೋಜನೆಯಡಿ ಖರೀದಿಸುವ ಹಾಲಿನ ಬೆಲೆಯನ್ನು 5 ರೂ.ವರೆಗೆ ಕಡಿತ ಮಾಡಿರುವುದು ಕೊರೋನ ಕಾಲದಲ್ಲಿ ರೈತರ ಕಷ್ಟದ ಮೇಲೆ ರಾಜ್ಯ ಸರಕಾರ ಹಾಕಿದ ಇನ್ನೊಂದು ಬರೆ. ಈ ರೀತಿ ಬೆಲೆ ಇಳಿಸುವ ಮೂಲಕ ರೈತರ ಜೊತೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನೇ ನಾಶ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟ ಹಾಗೆ ಕಾಣುತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕ್ಷೀರಧಾರೆ ಯೋಜನೆಯಡಿ ರೈತರ ಹಾಲಿಗೆ 5 ರೂ.ನಂತೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸುಮಾರು 138 ಕೋಟಿ ರೂ.ಗಳಷ್ಟು ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ. ಈ ಬಾಕಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಲೀಟರ್ ಹಾಲಿಗೆ ಕನಿಷ್ಟ 35 ರೂ.ನೀಡಿ ರೈತರಿಂದ ಹಾಲನ್ನು ಖರೀದಿಸಬೇಕು' ಎಂದು ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News