ಕೊರೋನ ಜಾಗೃತಿಗೆ ಜಾಹೀರಾತು ಫಲಕ ಅಳವಡಿಕೆ: ಸರಕಾರಕ್ಕೆ ಷರತ್ತು ಬದ್ಧ ಅನುಮತಿ ನೀಡಿದ ಹೈಕೋರ್ಟ್

Update: 2020-07-15 13:38 GMT

ಬೆಂಗಳೂರು, ಜು.15: ನಗರದ ನಾಗರಿಕರಿಗೆ ಕೊರೋನ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಸೋಂಕು ನಿಯಂತ್ರಿಸಲು ನಿಗದಿತ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕಲು ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.

ಇತ್ತೀಚೆಗೆ ನಗರದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿದ್ದು, ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಹೀರಾತುಗಳ ಮೂಲಕ ಅರಿವು ಮೂಡಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

ಜಾಹೀರಾತು ಫಲಕಗಳಲ್ಲಿ ಹತ್ತಿ ಬಟ್ಟೆಯನ್ನೇ ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು. ಕೊರೋನ ಸೋಂಕು ನಿಯಂತ್ರಣ ಕ್ರಮಗಳ ಕುರಿತು ಮಾತ್ರವೇ ಜಾಹೀರಾತು ನೀಡಬೇಕು. ಜಾಗೃತಿ ಜತೆಗೆ ಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆ ಮತ್ತು ಅವುಗಳಲ್ಲಿ ಲಭ್ಯವಿರುವ ಬೆಡ್ ಮತ್ತಿತರ ವಿಷಯಗಳ ಕುರಿತೂ ಜಾಹೀರಾತು ನೀಡಬಹುದು. ಕೊರೋನ ನಿಯಂತ್ರಣ ನಿರ್ಮೂಲನೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರದರ್ಶಿಸುವ ವೇಳೆ ಪ್ರಾಯೋಜಕರ, ಖಾಸಗಿ ಉತ್ಪನ್ನ-ಸೇವೆಗಳ ಕುರಿತ ವಿವರಗಳು ಇರಬಾರದು.

ಇನ್ನು ಹಿಂದಿನ ವಿಚಾರಣೆ ಸಂದರ್ಭಗಳಲ್ಲಿ ಹೈಕೋರ್ಟ್, ಜಾಹೀರಾತು ಪ್ರದರ್ಶನಕ್ಕೆ ಬಳಸುವ ಸಾಮಗ್ರಿಗಳ ಕುರಿತು ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ ರಾಜ್ಯ ಸರಕಾರ ಹೋರ್ಡಿಂಗ್ಸ್ ಗಳಲ್ಲಿ ಹತ್ತಿ ಬಟ್ಟೆಯನ್ನಷ್ಟೇ ಬಳಸುತ್ತೇವೆ. ಕೊರೋನ ನಿಯಂತ್ರಣವಾದ ಬಳಿಕ ಫಲಕಗಳನ್ನು ಸಂಪೂರ್ಣ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ. ಹಾಗೂ ಜಾಹೀರಾತಿನ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ಪ್ರಾಯೋಜಕರ ನೆರವು ಕೋರುವುದಿಲ್ಲ ಎಂದು ಹೇಳಿತ್ತು.

ಈ ಎಲ್ಲ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದ ನ್ಯಾಯಪೀಠವು ಈ ಕುರಿತು ಬಿಬಿಎಂಪಿಗೆ ಲಿಖಿತ ರೂಪದಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿತ್ತು. ಇನ್ನು ವಿಚಾರಣೆ ವೇಳೆ ಅನಧಿಕೃತ ಜಾಹೀರಾತು ನಿಷೇಧ ಕೋರಿರುವ ಮೂಲ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಕೊರೋನ ಜಾಹೀರಾತಿಗೆ ಸರಕಾರ 49.5 ಕೋಟಿ ಮೀಸಲಿರಿಸಿದೆ. ಅಷ್ಟೊಂದು ಹಣದ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಸರಕಾರ ಜಾಹೀರಾತು ಯೋಜನೆಗೆ ಅಷ್ಟು ಹಣ ಮೀಸಲಿರಿಸಿದೆ. ಹಾಗೆಂದ ಮಾತ್ರಕ್ಕೆ ಅಷ್ಟೂ ಹಣವನ್ನು ಖರ್ಚು ಮಾಡುತ್ತದೆ ಎಂದರ್ಥವಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News