ಪ್ಲಾಸ್ಮಾ ದಾನ ಮಾಡುವವರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ: ಸಚಿವ ಡಾ.ಸುಧಾಕರ್

Update: 2020-07-15 15:44 GMT

ಬೆಂಗಳೂರು, ಜು.15: ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವವರು, ಇತರ ಸೋಂಕಿತರಿಗೆ ತಮ್ಮ ಪ್ಲಾಸ್ಮಾ ದಾನ ಮಾಡಿದರೆ ರಾಜ್ಯ ಸರಕಾರದ ವತಿಯಿಂದ 5,000 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ಝೂಮ್ ಆ್ಯಪ್ ಮೂಲಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ 18,466 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಐಸಿಯುನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದರು.

ಬೆಂಗಳೂರಿನ ಎಲ್ಲ ವಲಯಗಳ ಬೂತ್ ಕಾರ್ಯಪಡೆಯ ನೋಡಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, 2 ದಿನಗಳಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಲಾಗಿದೆ. ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಲಾಕ್‍ಡೌನ್ ಅವಧಿಯಲ್ಲಿ ಮನೆಮನೆ ಸಮೀಕ್ಷೆ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ ರಿವರ್ಸ್ ಐಸೋಲೇಶನ್ ಮಾಡಲು ಸೂಚನೆ ನೀಡಲಾಗಿದೆ. ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಒದಗಿಸುವುದು ಮುಂತಾದ ನಿರ್ಧಾರಗಳನ್ನು ಕಾರ್ಯಪಡೆ ತೆಗೆದುಕೊಳ್ಳಲಿದೆ ಎಂದು ಸುಧಾಕರ್ ತಿಳಿಸಿದರು.

ಕೋವಿಡ್ ನಿರ್ವಹಣೆ ಮತ್ತು ನಿಗ್ರಹಕ್ಕೆ ಸರಕಾರದ ಜೊತೆ ಕೈಜೋಡಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ ಅವರು, ಈ ಮಹತ್ವದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದ್ದು, ಇಂದಿಗೆ 9 ಲಕ್ಷ ಕೋವಿಡ್ ಟೆಸ್ಟ್ ಗಳು ಪೂರ್ಣವಾಗಿವೆ. ಇವತ್ತು ಒಂದೇ ದಿನ 22,204 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಇಂದು 3,000ಕ್ಕೂ ಅಧಿಕ ಸೋಂಕಿತರು ದೃಢಪಟ್ಟಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಈ ಪೈಕಿ 1975 ಸೋಂಕಿತರು ಗುರುತಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

25 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಾಗಿದೆ. ಕೋವಿಡ್ ಟೆಸ್ಟ್ ಮಾಡದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲ್ಯಾಬ್‍ಗಳಲ್ಲಿ ಉಪಕರಣಗಳ ಕೊರತೆ ಪೂರೈಸಲು ನಿರ್ದೇಶನ ನೀಡಲಾಗಿದೆ. 1 ವಾರದಲ್ಲಿ ಎಲ್ಲ ಲ್ಯಾಬ್‍ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ಕನಿಷ್ಠ 500 ಟೆಸ್ಟ್ ನಡೆಸಲು ಖಾಸಗಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, 1 ವಾರದೊಳಗೆ 25 ಸಾವಿರ ದಿಂದ–30 ಸಾವಿರ ಟೆಸ್ಟ್ ನಡೆಸುವ ಗುರಿ ಇದೆ ಎಂದು ಅವರು ತಿಳಿಸಿದರು.

ಪ್ರತಿಭಟನೆ ನಡೆಸುತ್ತಿರುವ ದಾವಣಗೆರೆಯ ಜೆಜೆಎಂಎಂಸಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ 3-4 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಅರಿಯರ್ಸ್ (ಹಿಂಬಾಕಿ) ಸಮೇತ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News