ಕೈ ಬಿಟ್ಟ ಸಿಬಿಎಸ್‌ಇ ಪಠ್ಯಗಳು: ಆರೆಸ್ಸೆಸ್‌ನ ಹೊರೆ ಇಳಿಸಿದ ಸರಕಾರ

Update: 2020-07-15 19:30 GMT

ತನ್ನ ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಸರಕಾರವೇ ಕೊರೋನವನ್ನು ಸಾಕುತ್ತಿದೆಯೇ? ಇಡೀ ದೇಶ ಲಾಕ್‌ಡೌನ್ ಹೆಸರಲ್ಲಿ ಬಂದಿಯಾಗಿರುವ ಸಂದರ್ಭವನ್ನು ಸರಕಾರ ದುರುಪಯೋಗಗೊಳಿಸುತ್ತಿರುವ ರೀತಿ ಇಂತಹದೊಂದು ಅನುಮಾನವನ್ನು ಹುಟ್ಟಿಸಿದೆ. ಜನ ಕೊರೋನದ ಆತಂಕದಲ್ಲಿ ತತ್ತರಿಸಿರುವ ಸಂದರ್ಭದಲ್ಲೇ, ಸಿಎಎ ವಿರೋಧಿಗಳ ಬಂಧನ, ಜನಪರ ಹೋರಾಟಗಾರರ ಸೆರೆ, ಜನವಿರೋಧಿ ಕಾನೂನುಗಳ ಜಾರಿ ಯಾವ ಎಗ್ಗಿಲ್ಲದೇ ನಡೆಯುತ್ತಿವೆ. ಇದೀಗ ಕೊರೋನ ಹೆಸರಿನಲ್ಲಿ ಸರಕಾರ ಇನ್ನೊಂದು ಅನಾಹುತಕ್ಕೆ ಇಳಿದಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2020-21) 9ರಿಂದ 12ನೇ ತರಗತಿಯ ಪಠ್ಯಕ್ರಮಗಳಿಂದ ಮೊದಲ ಮೂರು ಪಠ್ಯಗಳನ್ನು ಕೈಬಿಡಲು ನಿರ್ಧರಿಸಿದೆ.

ಗಣರಾಜ್ಯವಾದ, ರಾಷ್ಟ್ರೀಯತೆ, ಲಿಂಗ-ಧರ್ಮ-ಜಾತಿ, ಆಹಾರ ಭದ್ರತೆ, ದೇಶವಿಭಜನೆ, ಸರಕು ಮತ್ತು ಸೇವಾ ತೆರಿಗೆ ಕುರಿತ ಅಧ್ಯಾಯಗಳನ್ನು ಅದು ತೆಗೆದುಹಾಕಲಿದೆ.ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶಾಲಾಶಿಕ್ಷಣವು ಬಾಧಿತವಾಗಿರುವುದರಿಂದ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆಗೊಳಿಸಲು ಪಠ್ಯಗಳನ್ನು ಕಡಿತಗೊಳಿಸುವಂತೆ ಕೇಂದ್ರ ಸರಕಾರ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಈ ನಿರ್ಧಾರ ಕೈಗೊಂಡಿದೆಯಂತೆ. ಸರಕಾರದ ಈ ನಿರ್ಧಾರದ ಬೆನ್ನಿಗೇ ಪರವಿರುದ್ಧ ಚರ್ಚೆಗಳು ಎದ್ದಿವೆ. ಮಾನವಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮಂಗಳವಾರ ಟ್ವೀಟ್ ಮಾಡಿ, 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಕಲಿಕೆಯ ಹೊರೆಯನ್ನು ಕಡಿಮೆಗೊಳಿಸುವಂತೆ ತನ್ನ ಸಚಿವಾಲಯವು ಸಿಬಿಎಸ್‌ಇಗೆ ಸಲಹೆ ನೀಡಿದೆ ಎಂದು ತಿಳಿಸಿದ್ದರು. ಆದಾಗ್ಯೂ ಖ್ಯಾತ ಸಮಾಜಶಾಸ್ತ್ರಜ್ಞ್ಞೆ ಆ್ಯಂಡ್ರೆ ಬೆಟೈಯಿಲ್ ಅವರು ಪಠ್ಯಕ್ರಮಗಳನ್ನು ಕಡಿಮೆಗೊಳಿಸುವ ಸಿಬಿಎಸ್‌ಇನ ಚಿಂತನೆಯನ್ನು ವಿರೋಧಿಸಿದ್ದಾರೆ.

‘‘ಪಠ್ಯಕ್ರಮಗಳ ಕಡಿತವು ಒಂದು ಉತ್ತಮ ವಿಚಾರವಲ್ಲ. ಒಂದು ವೇಳೆ ಅಗತ್ಯವಿದ್ದಲ್ಲಿ ಶಾಲಾ ಪರೀಕ್ಷೆಗಳನ್ನು ಮುಂದೂಡಬಹುದಾಗಿತ್ತು ಅಥವಾ ರದ್ದುಪಡಿಸಬಹುದಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ದರ್ಜೆಯನ್ನು ನೀಡಲು ಪರ್ಯಾಯ ಕಾರ್ಯತಂತ್ರಗಳನ್ನು ಅನುಸರಿಸಬಹುದಾಗಿತ್ತು’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೊರೋನ ಸಾಂಕ್ರಾಮಿಕ ಹಾವಳಿಯನ್ನು ಬಳಸಿಕೊಂಡು ಮೋದಿ ಸರಕಾರವು ಭಾರತದ ವೈವಿಧ್ಯತೆ,ಬಹುತ್ವ, ಪ್ರಜಾಪ್ರಭುತ್ವ ಮತ್ತಿತರ ನಮ್ಮ ಸಂವಿಧಾನದ ವೌಲ್ಯಗಳನ್ನು ಮಾಧ್ಯಮಿಕ ಶಿಕ್ಷಣದ ಪಠ್ಯಕ್ರಮದಿಂದ ತೆಗೆದುಹಾಕಿದೆ ಎಂದು ಯೆಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡಾ ಸಿಬಿಎಸ್‌ಇ ಪಠ್ಯಗಳನ್ನು ಕಡಿತಗೊಳಿಸುವ ಹೆಸರಿನಲ್ಲಿ ಪೌರತ್ವ, ಫೆಡರಲ್‌ವಾದ,ಜಾತ್ಯತೀತತೆ ಹಾಗೂ ದೇಶವಿಭಜನೆ ಪಾಠಗಳಿಗೆ ಕೇಂದ್ರ ಸರಕಾರ ಕತ್ತರಿ ಹಾಕಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಮಹತ್ವದ ಪಾಠಗಳನ್ನು ಯಾವುದೇ ಬೆಲೆ ತೆತ್ತಾದರೂ ಪಠ್ಯಕ್ರಮದಿಂದ ತೆಗೆದುಹಾಕಬಾರದೆಂದು ಅವರು ಪಟ್ಟು ಹಿಡಿದಿದ್ದಾರೆ.

ಮೇಲಿನ ಪಠ್ಯಗಳು ನಿಜಕ್ಕೂ ಹೊರೆಯಾಗಿರುವುದು ಯಾರಿಗೆ ? ವಿದ್ಯಾರ್ಥಿಗಳಿಗೋ? ಅಥವಾ ಸರಕಾರಕ್ಕೋ? ಎನ್ನುವ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಈ ದೇಶದ ಫೆಡರಲ್ ವಾದಕ್ಕೆ, ಜಾತ್ಯತೀತತೆಗೆ, ಪೌರತ್ವಕ್ಕೆ ಬೇರೆ ಬೇರೆ ನೆಲೆಗಳಿಂದ ಹೊಡೆತಗಳು ಬೀಳುತ್ತಿವೆ. ಈ ದೇಶದ ಬಹುತ್ವವನ್ನು ನಾಶ ಮಾಡಿ ಏಕ ಭಾರತವೊಂದನ್ನು ಕಟ್ಟುವ ಸರ್ವಾಧಿಕಾರಿ ರಾಷ್ಟ್ರೀಯವಾದ ತಲೆ ಎತ್ತುತ್ತಿವೆ. ವಿವಿಧ ರಾಜ್ಯಗಳು ತಮ್ಮ ಮೇಲೆ ಹೇರುತ್ತಿರುವ ಹಿಂದಿಯ ವಿರುದ್ಧ ತೀವ್ರ ಪ್ರತಿರೋಧಗಳನ್ನು ವ್ಯಕ್ತಪಡಿಸುತ್ತಿವೆ. ಜೊತೆಗೆ, ರಾಜ್ಯಗಳ ಹಕ್ಕುಗಳು ಹಂತ ಹಂತವಾಗಿ ದಮನವಾಗುತ್ತಿರುವುದರ ಬಗ್ಗೆಯೂ ರಾಜ್ಯಗಳು ಕೇಂದ್ರದ ಜೊತೆಗೆ ತಿಕ್ಕಾಟ ನಡೆಸುತ್ತಿವೆ. ‘ಪೌರತ್ವ’ವಂತೂ ಕಳೆದ ಕೆಲವು ವರ್ಷಗಳಿಂದ ತೀವ್ರ ಚರ್ಚೆಯಲ್ಲಿದೆೆ ಮಾತ್ರವಲ್ಲ, ತಮ್ಮ ಪೌರತ್ವದ ಹಕ್ಕಿಗಾಗಿ ಜನರು ಬೀದಿಗಿಳಿದು ಹೋರಾಟ ನಡೆಸುವ, ಪೊಲೀಸರ ಗುಂಡಿಗೆ ಎದೆಯೊಡ್ಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನದಲ್ಲಿರುವ ಜಾತ್ಯತೀತ ವೌಲ್ಯಗಳ ವಿರುದ್ಧ ಸಂಘಪರಿವಾರ ನಾಯಕರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಈ ದೇಶವನ್ನು ‘ಹಿಂದುತ್ವ ರಾಷ್ಟ್ರ’ವನ್ನಾಗಿಸಲು ಅವರು ಸಂಚು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಬಿಎಸ್‌ಇ ಪಠ್ಯಗಳಿಂದ ಪೌರತ್ವ, ಜಾತ್ಯತೀತತೆ, ಗಣರಾಜ್ಯದಂತಹ ಮಹತ್ವದ ವಿಷಯಗಳನ್ನೇ ಕಿತ್ತು ಹಾಕಲು ಹೊರಟಿರುವುದನ್ನು ನಾವು ಖಂಡಿತವಾಗಿಯೂ ಸಂಶಯದಿಂದ ನೋಡಬೇಕಾಗುತ್ತದೆ.
 
  ಸಿಬಿಎಸ್‌ಇ ಪಠ್ಯಗಳು ಇಡೀ ದೇಶದ ವಿದ್ಯಾರ್ಥಿಗಳನ್ನು ಒಂದು ಛತ್ರಿಯ ಅಡಿಯಲ್ಲಿ ತರುತ್ತದೆ. ಸಿಬಿಎಸ್‌ಇಯ ಮೊದಲ ದೌರ್ಬಲ್ಯವೇ ಇದು. ಸಿಬಿಎಸ್‌ಇ ಪಠ್ಯದಲ್ಲಿ ಪ್ರಾದೇಶಿಕತೆಗೆ ಪ್ರಾಧಾನ್ಯತೆಯಿಲ್ಲ. ಈ ದೇಶದ ಬಹುತ್ವ, ವೈವಿಧ್ಯತೆಗಳಿಗೆ ಪಠ್ಯಗಳು ಆದ್ಯತೆ ನೀಡದೆ, ದಿಲ್ಲಿ ಕೇಂದ್ರಿತವಾಗಿ ವಿದ್ಯಾರ್ಥಿಗಳು ವಿಷಯ ವೈವಿಧ್ಯವನ್ನು ಕಲಿಯಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಪೌರತ್ವದಂತಹ ಸಂವಿಧಾನದೊಳಗೆ ಅಡಕವಾಗಿರುವ ಮಹತ್ವದ ವಿಷಯಗಳನ್ನೇ ಕೈ ಬಿಟ್ಟರೆ, ಸಿಬಿಎಸ್‌ಇ ಪಠ್ಯದಲ್ಲಿ ಉಳಿಯುವುದಾದರೂ ಏನು? ವಿದ್ಯಾರ್ಥಿಗಳು, ಪೋಷಕರು ಸರಕಾರದ ಜೊತೆಗೆ ಯಾವತ್ತೂ ಈ ವಿಷಯಗಳು ನಮಗೆ ಹೊರೆಯಾಗಿವೆ ಎಂದು ಹೇಳಿದ, ಆಗ್ರಹಿಸಿದ ಉದಾಹರಣೆಗಳಿಲ್ಲ. ಲಾಕ್‌ಡೌನ್ ಮತ್ತು ಕೊರೋನಾದಿಂದಾಗಿ ದೇಶದ ಶಿಕ್ಷಣವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಬಿದ್ದಿರುವಾಗ, ಅದನ್ನು ಸರಿಪಡಿಸಲಾಗದ ಸರಕಾರ, ಸಂವಿಧಾನದ ಆಶಯಗಳನ್ನು ಪಠ್ಯಗಳಿಂದ ಕಿತ್ತು ಹಾಕಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ.

ಈ ವಿಷಯಗಳು ನಿಜಕ್ಕೂ ಹೊರೆಯಾಗಿರುವುದು ಆರೆಸ್ಸೆಸ್‌ನಂತಹ ಸಂಘಟನೆಗಳಿಗೆ. ಮತ್ತು ಅವುಗಳ ಮೇಲಿನ ಹೊರೆಯನ್ನು ಈ ಮೂಲಕ ಇಳಿಸಲು ಹೊರಟಿದೆ ಸರಕಾರ. ಆರೆಸ್ಸೆಸ್‌ನ ಅಜೆಂಡಾ ಜಾರಿಗೆ ತರಲು ಸಂವಿಧಾನದೊಳಗಿರುವ ಮೇಲಿನ ಎಲ್ಲ ವಿಷಯಗಳೂ ಅಡೆತಡೆಗಳೇ ಆಗಿವೆ. ಆದುದರಿಂದ, ಹಂತಹಂತವಾಗಿ ಜನರ ನಡುವಿನಿಂದ ಈ ವಿಷಯಗಳನ್ನು ದೂರಗೊಳಿಸುವ ಆರೆಸ್ಸೆಸ್‌ನ ಸಂಚಿನ ಭಾಗವಾಗಿ ಪಠ್ಯಗಳಿಂದ ಇವುಗಳನ್ನು ಕಿತ್ತು ಹಾಕಲಾಗಿದೆ. ಆರೆಸ್ಸೆಸ್ ತನ್ನ ಚಿಂತನೆಗಳನ್ನು ಹರಡುವುದಕ್ಕಾಗಿ ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಇಂದು ನಿನ್ನೆಯಲ್ಲ. ಸಂಸ್ಕೃತಿಯನ್ನು ಕಲಿಸುವ ಹೆಸರಿನಲ್ಲಿ ತನ್ನ ಶಾಖೆಗಳಲ್ಲಿ ಸಂವಿಧಾನ ವಿರೋಧಿ ಚಿಂತನೆಗಳನ್ನು ಬಾಲಕರ ತಲೆಗೆ ತುಂಬುವ ಕೆಲಸವನ್ನು ಅದು ನಿರಂತರವಾಗಿ ಮಾಡಿಕೊಂಡು ಬಂದಿದೆ. ಅಮರ ಚಿತ್ರ ಕತೆಗಳಂತಹ ಪುಸ್ತಕಗಳಲ್ಲೂ ತಪ್ಪು ಇತಿಹಾಸಗಳನ್ನು ರಮ್ಯವಾಗಿ ಮಕ್ಕಳಿಗೆ ಹೇಳಿ, ಬಾಲ್ಯದಲ್ಲೇ ಅವರಲ್ಲಿ ಪ್ರತಿಗಾಮಿ ಚಿಂತನೆಗಳ ಬೀಜಗಳನ್ನು ಬಿತ್ತುತ್ತವೆ. ಇದೀಗ ಅದು ಎರಡನೇ ಹಂತಕ್ಕೆ ಬಹುತೇಕ ಕಾಲಿಟ್ಟಿದೆ. ಅಂದರೆ ನೇರವಾಗಿ ಶಾಲೆಯ ಇತಿಹಾಸ ಪಠ್ಯಗಳನ್ನೇ ತಿರುಚುವುದು. ಎಲ್ಲೆಲ್ಲ ಬಿಜೆಪಿ ರಾಜ್ಯಗಳಿವೆಯೋ ಅಲ್ಲೆಲ್ಲ ಆ ಕೆಲಸಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿವೆ.

ಇತಿಹಾಸವನ್ನು ತಿರುಚುವುದರ ಜೊತೆಗೆ, ಇದೀಗ ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪಠ್ಯಗಳನ್ನೇ ಕಿತ್ತು ಹಾಕುವ ಮಟ್ಟಕ್ಕೆ ತಲುಪಿದೆ. 9ನೇ ತರಗತಿಯೆಂದರೆ, ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟ. ಯಾವುದೇ ವಿಷಯಗಳನ್ನು ಬಿತ್ತಿದರೆ ಮೊಳಕೆ ಒಡೆಯುವ ಸಮಯ. ಈ ಸಂದರ್ಭದಲ್ಲಿ ಭಾರತದ ಸಂವಿಧಾನದ ಆಶಯಗಳನ್ನು ಅವರ ಮೆದುಳಲ್ಲಿ ಬಿತ್ತಿ ಬೆಳೆಸಿದರೆ ಮಾತ್ರ ಅದು ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಬಹುದು. ಆಳವಾಗಿ ಬೇರಿಳಿಸಬಹುದು. ಆದುದರಿಂದಲೇ ಆರೆಸ್ಸೆಸ್‌ಗೆ ಈ ಪಠ್ಯಗಳು ಹೊರಲಾಗದಷ್ಟು ಭಾರ ಎನ್ನಿಸಿದೆ. ಕೊರೋನದ ನೆಪವನ್ನು ಮುಂದಿಟ್ಟುಕೊಂಡು ಸರಕಾರ ಇದೀಗ ಆರೆಸ್ಸೆಸ್‌ನ ಹೆಗಲಿನ ಭಾರ ಇಳಿಸುವುದಕ್ಕೆ ಹೊರಟಿದೆ. ಸರಕಾರದ ಈ ಕ್ರಮ, ಶಿಕ್ಷಣದ ಮೂಲ ಆಶಯಕ್ಕೆ ನೀಡಿರುವ ಬಹುದೊಡ್ಡ ಆಘಾತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News