ಕೋವಿಡ್ ನಿಯಂತ್ರಿಸುವ ಬದಲು ವಿಷಕಂಠನ ಕಥೆ ಹೇಳಿ ಕೈಚೆಲ್ಲಿದ ಸಚಿವ ಸುಧಾಕರ್: ವೆಲ್ಫೇರ್ ಪಾರ್ಟಿ ಆರೋಪ

Update: 2020-07-15 18:27 GMT

ಬೆಂಗಳೂರು, ಜು.15: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ಅದನ್ನು ನಿಯಂತ್ರಣದ ಆಲೋಚನೆ ಮಾಡುವುದನ್ನು ಬಿಟ್ಟು, ಜವಾಬ್ದಾರಿ ಸ್ಥಾನದಲ್ಲಿರುವ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಿಷಕಂಠನ ಕಥೆ ಹೇಳುವ ಮೂಲಕ ಕೈ ಚೆಲ್ಲಿ ಕುಳಿತಿರುವುದು ಬಿಜೆಪಿ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ಕೋವಿಡ್-19 ಕಂಟ್ರೋಲ್ ರೂಮಿನಲ್ಲಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಸಾಂಕ್ರಾಮಿಕತೆಯ ಬಗ್ಗೆ ಸಮಾಧಾನ ಹಾಗೂ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಧೈರ್ಯ ಹೇಳುವ ಬದಲು, ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಜಗಳದಲ್ಲಿ ಬಂದ ವಿಷವನ್ನು ಸೇವನೆ ಮಾಡಿದ ವಿಷಕಂಠ ಎಂದು ಗತಕಾಲದ ಪುರಾಣವನ್ನು ಹೇಳುತ್ತಾ ಸಚಿವರು ತಮ್ಮ ವೈಫಲ್ಯತೆಯನ್ನು ಮರೆಮಾಚಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಸರಕಾರದಲ್ಲಿನ ಸಚಿವರ ಮಧ್ಯೆ ಸಾಮರಸ್ಯದ ಕೊರತೆಯಿಂದ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ರಾಜ್ಯದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ತಾವು ಮಾಡುವ ಕೆಲಸದಲ್ಲಿ ನಿರ್ಲಕ್ಷತನ ತೋರುತ್ತಿದ್ದು, ತಮ್ಮ ವೈಫಲ್ಯವನ್ನು ಮತ್ತೊಬ್ಬರ ಮೇಲೆ ಹಾಕುವ ಕಾರ್ಯ ಮಾತ್ರ ಹಾಸ್ಯಾಸ್ಪದವಾಗಿದೆ ಎಂದು ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯದ ವಾತಾವರಣದಲ್ಲಿ ಇರುವ ರಾಜ್ಯದ ಜನರನ್ನು ಸಂತೈಸಿ, ಅವರಿಗೆ ಧೈರ್ಯ ತುಂಬುವ ಜೊತೆಗೆ ಸರಕಾರ ಕೊರೋನ ಸೋಂಕು ನಿವಾರಣೆಯತ್ತ ಯುದ್ಧೋಪಾದಿಯಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕು. ಸಚಿವರು ತಮ್ಮ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಸಮುದಾಯಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರಕಾರ ತುರ್ತಾಗಿ ಕೈಗೊಳ್ಳಬೇಕು ಎಂದು ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News