ಕೋವಿಡ್‍ಗೆ ಬಲಿಯಾಗುವ ಮುನ್ನ ಸಾವಿರಾರು ದಿನಗೂಲಿ ಕಾರ್ಮಿಕರ ಹಸಿವು ತಣಿಸಿದ್ದ ಸ್ವಯಂಸೇವಕ

Update: 2020-07-16 03:58 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದ್ವಾರ್ಕಾ ಪ್ರದೇಶದ ಅರುಣ್ ಸಿಂಗ್ ಎಂಬ ನಾಗರಿಕ ರಕ್ಷಣಾ ಕಾರ್ಯಕರ್ತ ದಿನವಿಡೀ ದುಡಿದು ಸಂಜೆಯ ವೇಳೆ ಸಾವಿರಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರಿಗೆ ಆಹಾರ ವಿತರಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಏಪ್ರಿಲ್ 20ರ ನಂತರ ಪ್ರತಿದಿನ ಇದನ್ನು ತಪಸ್ಸಿನಂತೆ ನಿರ್ವಹಿಸುತ್ತಾ ಬಂದ ಅವರು ಕಳೆದ ಸೋಮವಾರ ಕೋವಿಡ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ದ್ವಾರ್ಕಾ ಸೆಕ್ಟರ್ 25ರಲ್ಲಿ ನಿರ್ಮಾಣ ಕಂಪನಿಯೊಂದರ ಯೋಜನಾ ಕ್ಷೇತ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಾವಿರಕ್ಕೂ ಹೆಚ್ಚು ದಿನಗೂಲಿಗಳಿಗೆ ಪ್ರತಿದಿನ ಆಹಾರ ವಿತರಣೆ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಆರುಣ್ ಸಿಂಗ್ (48), ದೆಹಲಿಯ ಕೋವಿಡ್ ಸ್ಪಂದನೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಇಂಥ ಸಾವಿರಾರು ಸ್ವಯಂಸೇವಕರ ಪೈಕಿ ಒಬ್ಬರು.

ಈ ತಿಂಗಳ ಆರಂಭದಲ್ಲಿ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟ ಅವರನ್ನು ಜುಲೈ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ 9.30ಕ್ಕೆ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಸಿಂಗ್ ಕೊನೆಯುಸಿರೆಳೆದರು.

ಕಳೆದ ಕೆಲ ತಿಂಗಳ ಕಾಲ ಪ್ರತಿದಿನ ಆಹಾರ ಪೊಟ್ಟಣಗಳನ್ನು ಉದ್ದುದ್ದ ಸರದಿಯಲ್ಲಿ ಕಾಯುತ್ತಿದ್ದ ದಿನಗೂಲಿಗಳಿಗೆ ಅಚ್ಚುಗಟ್ಟಾಗಿ ವಿತರಿಸುತ್ತಿದ್ದರು. ಪತ್ನಿ, ಮಗ ಹಾಗೂ ಮಗಳಿಂದ ದೂರವಿದ್ದು, ಇದನ್ನು ದಿನನಿತ್ಯದ ಕಾಯಕವಾಗಿ ನಿರ್ವಹಿಸಿಕೊಂಡು ಬಂದಿದ್ದರು.

“ಅವರದ್ದು ಅದ್ಭುತ ಪ್ರಯತ್ನ. ಸಾಧನೆ ಅಮೋಘ. ಅವರಿಗೆ ನೀಡಿದ ಪ್ರತಿಯೊಂದು ಕಾರ್ಯವನ್ನೂ ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಅವರ ಸಾವು ನನಗೆ ವೈಯಕ್ತಿಕ ನಷ್ಟ” ಎಂದು ಉಪವಿಭಾಗಾಧಿಕಾರಿ ಚಂದ್ರಶೇಖರ್ ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಟ್ವೀಟ್ ಮೂಲಕ ಅರುಣ್‍ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ನಾಗರಿಕ ರಕ್ಷಣಾ ಸ್ವಯಂಸೇವಕರು ದಿಲ್ಲಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಮಾಸಿಕ 18 ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News