ಕೋವಿಡ್ ಕೇರ್ ಸೆಂಟರ್ ಗೆ ಹಾಸಿಗೆ, ದಿಂಬು ಬಾಡಿಗೆಗೆ ಬದಲಿಗೆ ಖರೀದಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-07-16 12:41 GMT

ಬೆಂಗಳೂರು, ಜು. 16: ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿನ 10,100 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಗೆ ಅಗತ್ಯವಿರುವ ಹಾಸಿಗೆ ಮತ್ತು ಇನ್ನಿತರ ಸಾಮಗ್ರಿಗಳು ಬಾಡಿಗೆಗೆ ಪಡೆಯಲು ಬಿಬಿಎಂಪಿ ತೀರ್ಮಾನಿಸಿತ್ತು. ಪ್ರತಿದಿನಕ್ಕೆ 800 ರೂ.ಗಳಂತೆ ತಿಂಗಳಿಗೆ 24 ಕೋಟಿ ರೂ.ವೆಚ್ಚವಾಗುತ್ತಿತ್ತು. ಇದು ದುಬಾರಿಯಾಗುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿ ಬೆಡ್‍ಗೆ ಅಗತ್ಯ ವಸ್ತುಗಳ ಪೈಕಿ ಮಂಚ, ಬೆಡ್, ಫ್ಯಾನ್, ಬಕೆಟ್, ಮಗ್, ಡಸ್ಟ್ ಬಿನ್‍ಗಳನ್ನು ಪ್ರತಿ ಸೆಟ್‍ಗೆ 7,500 ರೂ.ಮೊತ್ತದಲ್ಲಿ ಖರೀದಿ ಮಾಡಲು ಬೆಲೆ ನಿಗದಿಪಡಿಸಲಾಗಿದೆ. ಇದರಿಂದ 6,500 ಬೆಡ್‍ಗಳಿಗೆ ಬೇಕಾಗುವ ವಸ್ತುಗಳಿಗೆ 4.87 ಕೋಟಿ ರೂ.ಮೊತ್ತದಲ್ಲಿ ಖರೀದಿ ಮಾಡಲಾಗುವುದು ಎಂದರು.

ನೆಲ ಹಾಸಿಗೆ ಸಲುವಾಗಿ ವಿನೈಲ್ ಫ್ಲೋರಿಂಗ್ ಅನ್ನು ಪ್ರತಿ ಚದರ ಅಡಿಗೆ 31 ರೂ.ನಂತೆ ಖರೀದಿಸಲು ತೀರ್ಮಾನಿಸಿದ್ದು, ಒಟ್ಟು 7.9ಲಕ್ಷ ಚದರ ಅಡಿಗೆ 2.45 ಕೋಟಿ ರೂ.ವೆಚ್ಚವಾಗಲಿದೆ. ಪುನರ್ ಬಳಕೆಯಾಗದ 19 ವಸ್ತುಗಳನ್ನು ಪ್ರತಿ ಸೆಟ್‍ಗೆ ಪ್ರತಿ ತಿಂಗಳಿಗೆ 6,500 ರೂ.ಮೊತ್ತದಲ್ಲಿ ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ. ಇದರಿಂದ 4.23 ಕೋಟಿ ರೂ.ವೆಚ್ಚವಾಗಲಿದೆ ಎಂದು ಅವರು ವಿವರ ನೀಡಿದರು.

ಅಗತ್ಯ ವಸ್ತುಗಳ ಬಾಡಿಗೆ ಪಡೆಯುವ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಲೋಪದೋಷ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ತಪ್ಪಿದ್ದಲ್ಲಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಬಾಡಿಗೆಗೆ ಪಡೆಯುವುದರಿಂದ ಆಗುವ ಅನಗತ್ಯ ವೆಚ್ಚವನ್ನು ತಡೆಯಲಾಗಿದೆ. ವಸ್ತುಗಳ ಖರೀದಿ ಮೊತ್ತ 7.32 ಕೋಟಿ ರೂ.ಗಳನ್ನು ತಕ್ಷಣವೇ ಪೂರೈಕೆದಾರರಿಗೆ ಪಾವತಿಸಲು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News