ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ 50 ಲಕ್ಷಕ್ಕೂ ಹೆಚ್ಚು ರೈತರು ನಿರ್ಗತಿಕರಾಗಲಿದ್ದಾರೆ: ಎಸ್.ಆರ್.ಪಾಟೀಲ್

Update: 2020-07-16 12:49 GMT

ಬಾಗಲಕೋಟೆ, ಜು.16: ರಾಜ್ಯ ಸರಕಾರ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಲಾಭ ಮಾಡಿಕೊಡುವುದಕ್ಕಾಗಿ ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರಿಂದ, 50 ಲಕ್ಷಕ್ಕೂ ಹೆಚ್ಚು ರೈತರು ನಿರ್ಗತಿಕರಾಗಲಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಭೂಮಿ ಹಾಗೂ ರೈತರ ಮಧ್ಯೆ ಅವಿನಾಭಾವ ಸಂಬಂಧವಿದ್ದು, ರಾಜ್ಯ ಸರಕಾರ ರಿಯಲ್ ಎಸ್ಟೇಟ್ ದಂಧೆ ಕೋರರಿಗೆ ಲಾಭ ಮಾಡಿಕೊಡುವುದಕ್ಕಾಗಿ ಇಂತಹ ಸಂಬಂಧವನ್ನೇ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಅನೈಸರ್ಗಿಕ ಪ್ರಯತ್ನಗಳನ್ನು ಮಾಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಈ ಹೋರಾಟಕ್ಕೆ ನಾಡಿನ ಎಲ್ಲ ರೈತರ ವರ್ಗ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಕೊಂಡುಕೊಂಡರೆ ಬರೀ ಲಾಭದ ದೃಷ್ಟಿಯನ್ನು ಮಾತ್ರ ನೋಡುತ್ತಾರೆ. ಆದರೆ, ರೈತರು ಲಾಭಕ್ಕಿಂತಲೂ ಕೃಷಿ ಚಟುವಟಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದುಡಿಯುತ್ತಾರೆ. ಹಾಗೊಂದು ಬಾರಿ ಕಾಯ್ದೆ ಜಾರಿಯಾಗಿದ್ದೆ ಆದರೆ ಲಕ್ಷಾಂತರ ರೈತರು ನಿರ್ಗತಿಕರಾಗಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‍ನಿಂದ ಹೋರಾಟ: ಕೊರೋನ ಚಿಕಿತ್ಸೆಗೆ ಔಷಧಿ ಉಪಕರಣ ಖರೀದಿ ಹಗರಣದ ತನಿಖೆಗೆ ಸಿಎಂ ಬಿಎಸ್‍ವೈ ಸದನ ಸಮಿತಿ ರಚಿಸಲಿ. ಇಲ್ಲವೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನಿಖೆ ಮುಂದುವರೆಸಲು ಅವಕಾಶ ನೀಡಲಿ. ಆ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸುತ್ತೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News