ಗುನಾದಲ್ಲಿ ದಲಿತ ಕುಟುಂಬದ ಮೇಲೆ ಪೊಲೀಸರ ದೌರ್ಜನ್ಯ: ಅಧಿಕಾರಿಗಳು, ಸಿಬ್ಬಂದಿಯ ಅಮಾನತ್ತಿಗೆ ದಸಂಸ ಆಗ್ರಹ

Update: 2020-07-16 12:50 GMT

ಬೆಂಗಳೂರು, ಜು. 16: ಕಾನೂನು ಕಾಪಾಡಬೇಕಿರುವ ಪೊಲೀಸರೇ ಗೂಂಡಾಗಳಂತೆ ವರ್ತಿಸುವ ಮೂಲಕ ಮಧ್ಯಪ್ರದೇಶದ ಗುನಾದಲ್ಲಿ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿ, ಅವರ ಸಾವಿಗೆ ಕಾರಣಕರ್ತರಾದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ದಸಂಸ ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಆಗ್ರಹಿಸಿದ್ದಾರೆ.

ಸರಕಾರಿ ಭೂಮಿ ಅತಿಕ್ರಮಿಸಿ ಕೃಷಿ ಮಾಡಿದ್ದಾರೆಂಬ ಆರೋಪ ಹೊರಿಸಿ, ದಲಿತ ಕುಟುಂಬವೊಂದು ಬೆಳೆದ ಬೆಳೆಯನ್ನು ಜೆಸಿಬಿ ಮೂಲಕ ಅವರ ಕಣ್ಣುಮುಂದೆಯೇ ನಾಶಪಡಿಸಿದೆ, ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಟಾವು ಮಾಡಿದ ನಂತರ ತಾವು ನಿರ್ಧಾರ ಕೈಗೊಳ್ಳಿ, ಅಲ್ಲಿವರೆಗೂ ನಮ್ಮ ಬೆಳೆಯನ್ನು ಏನು ಮಾಡಬೇಡಿ ಎಂದು ಅಂಗಲಾಚಿದರೂ ಪೊಲೀಸರು ನಿರ್ದಾಕ್ಷಿಣ್ಯವಾಗಿ ಬೆಳೆಯನ್ನು ನಾಶಪಡಿಸಿದ್ದಾರೆ. ಇದರಿಂದ ಬೇಸತ್ತ ಆ ಕುಟುಂಬದ ಗಂಡ ಹೆಂಡತಿ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದು ಈ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ವಂಚಿತ ಸಮುದಾಯಗಳ ಮೇಲೆ ದೌರ್ಜನ್ಯ ಮಾಡಿದ್ದು, ಇಂಥ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಆದರೂ ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿದಾನಬದ್ಧ ಹೋರಾಟಗಳು ನಮಗೆ ತಿಳಿದಿರುವುದರಿಂದ ಸಂವಿಧಾನಕ್ಕೆ ಗೌರವವನ್ನು ನೀಡುತ್ತಿದ್ದೇವೆ. ಕೋವಿಡ್-19 ಮಹಾಮಾರಿ ದೇಶದಲ್ಲೆಡೆ ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ಪೊಲೀಸರು ಗೂಂಡ ವರ್ತನೆ ಅಮಾನವೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಜಿಲ್ಲಾ ಎಸ್ಪಿ ಮತ್ತು ಡಿಸಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು. ಈ ಕೂಡಲೇ ಮಧ್ಯಪ್ರದೇಶದ ಗೃಹ ಮಂತ್ರಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಅವರ ಕುಟುಂಬ ಮತ್ತು ಮಕ್ಕಳಿಗೆ ರಕ್ಷಣೆಯನ್ನು ನೀಡಬೇಕು ಹಾಗೂ ಅವರಿಗೆ ಈ ಕೂಡಲೇ 50 ಲಕ್ಷ ರೂ.ಪರಿಹಾರ ಘೋಷಣೆ ಮಾಡಬೇಕೆಂದು ಮಂಜುನಾಥ್ ಅಣ್ಣಯ್ಯ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News