ಲಾಕ್‌ಡೌನ್ ನಿಯಮ ಉಲ್ಲಂಘಿಸುವವರಿಗೆ ಪೊಲೀಸರ ಮೇಲೆ ಭಯ ಬರುವಂತೆ ಮಾಡಿ: ಸಚಿವ ಈಶ್ವರಪ್ಪ

Update: 2020-07-16 13:58 GMT

ಶಿವಮೊಗ್ಗ, ಜು.16: ಕೊರೋನ ಹರುಡುತ್ತಿರುವ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಗುಂಪು ಗೂಡುವವರಿಗೆ, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಪೊಲೀಸರೆಂದರೆ ಭಯ ಬರುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಸಚಿವರು, ಮಾಸ್ಕ್ ಧರಿಸದೇ ಓಡಾಡುವವರನ್ನ, ರಸ್ತೆಯ ಮೇಲೆ ವಿನಾಕಾರಣ ಅಡ್ಡಾಡುವವರಿಗೆ  ಪೊಲೀಸ್ ಇಲಾಖೆ ಬಗ್ಗೆ ಭಯ ಬರುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೊರೋನ ತನ್ನ ಕಬಂಧಬಾಹುವನ್ನು ವೇಗವಾಗಿ ವಿಸ್ತರಿಸುತ್ತಿದೆ. ದ್ವಿಚಕ್ರ ವಾಹನದಲ್ಲಿ ಓಡಾಡುವವರಿಗೆ ಕಡಿವಾಣ ಹಾಕಬೇಕು. ಲಾಕ್‌ಡೌನ್ ವೇಳೆ ಅನಗತ್ಯವಾಗಿ ತಿರುಗಾಡುವವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಲಾಕ್ ಡೌನ್ ಜಾರಿ ಸಂಬಂಧ ಈಗಾಗಲೇ ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಣಾಮಕಾರಿ ಲಾಕ್‌ಡೌನ್ ಕುರಿತು ಕ್ರಮ ಕೈಗೊಳ್ಳಲು ಸಮಾಲೋಚನೆ ನಡೆಸಲಾಗಿದ್ದು, ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅವುಗಳಲ್ಲಿ ಕೆಲವು ಸಲಹೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ಸರ್ಕಾರಿ ಕಚೇರಿಗಳನ್ನು ಶನಿವಾರದಂದು ತೆರೆಯದಿರುವಂತೆ ಹಾಗೂ ರಾಜ್ಯದ ಎಲ್ಲಾ ರವಿವಾರ ಲಾಕ್‌ಡೌನ್ ಘೋಷಿಸಿ ಆದೇಶ ಹೊರಡಿಸಲಾಗಿದೆ. ಈ ಎರಡು ದಿನಗಳಲ್ಲದೆ ಉಳಿದ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲೂ ಸರ್ಕಾರ ಸೂಚಿಸಿದೆ. ಜಿಲ್ಲಾಡಳಿತ ರೂಪಿಸಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಸಾರ್ವಜನಿಕರಿಗೆ ಈ ಸೋಂಕಿನ ಅರ್ಥವಾದಂತಿಲ್ಲ. ಮಾಸ್ಕ್ ಹಾಕದವರಿಗೆ, ಸಾರ್ವಜನಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ. ದುಡಿದು ತಿನ್ನುವ ಶ್ರಮಿಕ ವರ್ಗದವರಿಗೆ ತೊಂದರೆಯಾಗದಂತೆ ಪೊಲೀಸರು ಕ್ರಮವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಡಾ.ಶೇಖರ್ ಹೆಚ್.ಟಿ. ಅವರು ಉಪಸ್ಥಿತರಿದ್ದರು.

ಮಿನಿಸ್ಟರ್ ಸಭೆಯಲ್ಲಿ ಇನ್ಸ್‌ಪೆಕ್ಟರ್ ಅಳಲು
ಕೊರೋನ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ರಕ್ಷಣೆ ಇಲ್ಲವೇ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರು ಸಚಿವರಿಗೆ ಪ್ರಶ್ನೆ ಮಾಡಿದರು.

ಶಿವಮೊಗ್ಗ ಡಿಎಆರ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಸಂಬಂಧ ಪೊಲೀಸರ ಸಭೆಯಲ್ಲಿ
ಕೊರೋನ ವಾರಿಯರ್ಸ್ ಪೊಲೀಸರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಶಿವಮೊಗ್ಗದ ಎಎಸ್‌ಐ ಒಬ್ಬರು ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಯಾವ ಆಸ್ಪತ್ರೆಯಲ್ಲೂ ಅವರಿಗೆ ಚಿಕಿತ್ಸೆ ನೀಡಲಿಲ್ಲ. ಕೊರೋನ ತಪಾಸಣೆ ಮಾಡಿಸಿಕೊಂಡು ಹೋಗಿ ಎನ್ನುತ್ತಿದ್ದಾರೆ. ಕೊನೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಎಸ್‌ಐಗೆ ಚಿಕಿತ್ಸೆ ಕೊಡಿಸಬೇಕಾಯಿತು ಎಂದು ದೊಡ್ಡಪೇಟೆ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಬಳಿ ಅಳಲು ತೋಡಿಕೊಂಡರು. ಜೊತೆಗೆ ಕೊರೋನ ವಾರಿಯರ್ಸ್ ಗೆ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News