ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬಿದ ಕೊಡಗು ಜಿಲ್ಲಾಧಿಕಾರಿ

Update: 2020-07-16 13:15 GMT

ಮಡಿಕೇರಿ, ಜು.16: ನಗರದ ಹೊರವಲಯದ ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ವಿಶೇಷ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಕೋವಿಡ್ ಸೋಂಕಿತರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ ಅವರು, ಅಗತ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಕೋವಿಡ್ ಕೇರ್ ಸೆಂಟರ್ ನ ದ್ವಾರದಲ್ಲಿ ದಿನದ 24 ಗಂಟೆಗಳಲ್ಲಿಯೂ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯು ನಿಗದಿಪಡಿಸಿರುವ ಮೆನುವಿನಂತೆ ಕೋವಿಡ್ ಸೋಂಕಿತರಿಗೆ ಆಹಾರವನ್ನು ಸಕಾಲದಲ್ಲಿ ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆಯು ನಿಗದಿಪಡಿಸಿರುವ ಚಿಕಿತ್ಸಾ ಪದ್ಧತಿಯಂತೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಗಲು ವೇಳೆಯಲ್ಲಿ ಮೂವರು ನರ್ಸ್ ಮತ್ತು ರಾತ್ರಿ ವೇಳೆಯಲ್ಲಿ ಇಬ್ಬರು ನರ್ಸ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ವಾಸಕೋಶ ತಜ್ಞರ ಸಲಹೆಯಂತೆ ಒಬ್ಬ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಕೋವಿಡ್ ಸೋಂಕಿತರಿಗೆ ಹಾಸಿಗೆ, ಬೆಡ್ ಶೀಟ್, ಹೊದಿಕೆ, ಬಿಸಿ ನೀರಿಗಾಗಿ ಕೆಟಲ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ, ವಾಟರ್ ಹೀಟರ್ ಕಾಯಲ್‍ಗಳನ್ನು ಒದಗಿಸಲಾಗಿದೆ. ಕೋವಿಡ್ ಕೇರ್ ಸೆಂಟರ್ ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯೊಂದಿಗೆ ವಾರ್ಡ್ ಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ಮಹಿಳಾ ವಾರ್ಡ್‍ಗಳಲ್ಲಿ ಸೋಂಕಿತರು ಇರುವುದಿಲ್ಲ ಮತ್ತು ಪುರುಷರ ವಾರ್ಡ್ ನಲ್ಲಿ 7 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಆತಂಕ ಬೇಡ
ಒಂದು ವೇಳೆ ಮಹಿಳಾ ಸೋಂಕಿತರನ್ನು ಈ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಿದಲ್ಲಿ, ಆತಂಕ ಪಡುವ ಅಗತ್ಯವಿಲ್ಲ. ಈ ಸೆಂಟರ್ ನಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಮಹಿಳೆಯರಿಗಾಗಿಯೇ ಪ್ರತ್ಯೇಕ ವಾರ್ಡ್ ಸೌಲಭ್ಯದೊಂದಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಕೋವಿಡ್ ಕೇರ್ ಸೆಂಟರ್ ನ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ವಚ್ಛತೆಗಾಗಿ ಬರುತ್ತಿದ್ದ ಪಂಚಾಯತ್ ಗ್ರೂಪ್ ಡಿ ನೌಕರರೊಬ್ಬರು ಕೆಲಸ ಬಿಟ್ಟಿದ್ದರಿಂದ ಸಮಸ್ಯೆ ಉದ್ಭವಿಸಿದ್ದು, ಕೂಡಲೇ ಹೊಸ ನೌಕರರೊಬ್ಬರನ್ನು ಸ್ವಚ್ಛತೆ ಕೆಲಸಕ್ಕಾಗಿ ನಿಯೋಜಿಸುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ ಸಂಬಂಧ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದು, ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಕೋವಿಡ್ ಕೇರ್ ಸೆಂಟರ್ ನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಮರ್ಪಕ ರೀತಿಯಲ್ಲಿ ವಿಲೇಗೊಳಿಸಲಾಗುತ್ತಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಎಲ್ಲರೂ ಕೋವಿಡ್ ಕೇರ್ ಸೆಂಟರ್ ನಲ್ಲಿ ನೀಡಲಾಗುತ್ತಿರುವ ಆಹಾರ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ ನಿಲೇಶ್ ಶಿಂಧೆ, ತಹಶೀಲ್ದಾರ್ ಮಹೇಶ್, ತಾ.ಪಂ.ಇಒ ಪಿ.ಲಕ್ಷ್ಮಿ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News