ಕೊರೋನದಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲದಿದ್ದರೆ ಅಧಿಕಾರದಲ್ಲಿ ಏಕಿದ್ದೀರಿ: ಸಿದ್ದರಾಮಯ್ಯ

Update: 2020-07-16 14:47 GMT

ಬೆಂಗಳೂರು, ಜು. 16: `ಕೊರೋನ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕೆ ಇದ್ದೀರಿ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಸೋಂಕು ನಿಯಂತ್ರಣಕ್ಕೆ ಸರಕಾರ ತನ್ನೆಲ್ಲ ಪ್ರಯತ್ನಗಳನ್ನು ಮಾಡಿದ ಬಳಿಕವೂ ವಿಫಲವಾದಾಗ ದೇವರ ಮೊರೆ ಹೋಗುವುದು ಸರಿ. ಆದರೆ, ಸರಕಾರದಲ್ಲಿ ಹಣ, ಕೈಯ್ಯಲ್ಲಿ ಅಧಿಕಾರ ಎಲ್ಲವೂ ಇದ್ದು ಯಾವುದೇ ಪ್ರಯತ್ನ ಮಾಡದೇ ಈ ರೀತಿ ಹೇಳಿಕೆ ಕೊಡುವ ಸಚಿವ ಶ್ರೀರಾಮುಲು ಅವರು ರಾಜೀನಾಮೆ ಕೊಟ್ಟು ಹೋಗುವುದೇ ಸರಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸೋಂಕು ನಿಯಂತ್ರಣಕ್ಕೆ ಶ್ರಮಿಸುವುದು ಸಚಿವರೂ ಸೇರಿದಂತೆ ಸರಕಾರದ ಪ್ರಾಥಮಿಕ ಕರ್ತವ್ಯ. ಮೊದಲು ನಮ್ಮ ಪ್ರಯತ್ನ ಮಾಡಬೇಕು. ಪರಿಹಾರ ಕಂಡು ಹಿಡಿಯಬೇಕು ಎಂದು ಹೇಳುವ ಮೂಲಕ ಶ್ರೀರಾಮುಲು ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದ ಜನರನ್ನು ಈಗ‌ ಕಾಪಾಡುತ್ತಿರುವುದೇ ದೇವರು, ಸರ್ಕಾರ ಅಲ್ಲ. ಆದರೆ.... ಜನದ್ರೋಹಿಗಳನ್ನು, ಭ್ರಷ್ಟರನ್ನು ದೇವರೂ ಕಾಪಾಡಲಾರ. ಆ ನಿರೀಕ್ಷೆ ಬೇಡ... ಚಿನ್ನದ ಕಿರೀಟ ಅರ್ಪಿಸಿದರೂ ಜೈಲಿಗೆ ಹೋಗುವುದನ್ನು ತಿರುಪತಿ ತಿಮ್ಮಪ್ಪ ತಪ್ಪಿಸಲಿಲ್ಲ.

-ಸಿದ್ದರಾಮಯ್ಯ, (ಟ್ವೀಟ್)

ವೇತನ ಹೆಚ್ಚಳ ಸೇರಿದಂತೆ ಕೊರೋನ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೂಲಸೌಲಭ್ಯ ಒದಗಿಸಲು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಚಳವಳಿಗೆ ಬೆಂಬಲ ನೀಡುವುದಲ್ಲದೆ, ಅವರ ಸಮಸ್ಯೆಗೆ ಸರಕಾರ ಕೂಡಲೇ ಸ್ಪಂದಿಸಲು ಸಂಬಂಧಪಟ್ಟವರ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News