ರಾಜ್ಯ ರಾಜಧಾನಿಯಲ್ಲಿ ಒಂದೇ ದಿನ 2,344 ಮಂದಿಗೆ ಕೊರೋನ, 70 ಮಂದಿ ಸಾವು

Update: 2020-07-16 16:36 GMT

ಬೆಂಗಳೂರು, ಜು.16: ನಗರದಲ್ಲಿ ಗುರುವಾರ ಒಂದೇ ದಿನ 2,344 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ನಗರದಲ್ಲಿ ತೀವ್ರ ಉಸಿರಾಟ ತೊಂದರೆಗೆ ಸೂಕ್ತ ಚಿಕಿತ್ಸೆ ಸಿಗದೆ ಮೂವರು ಪೌರ ಕಾರ್ಮಿಕರು ಸೇರಿ ಒಟ್ಟು 70 ಮಂದಿ ಸಾವಿಗೀಡಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದ್ದು, 317 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 18,828 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 507 ಜನರು ಸೋಂಕಿಗೆ ಬಲಿಯಾಗಿದ್ದು, ಗುರುವಾರ 497 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 5,952 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 26,692 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬೆಡ್ ಸಿಗದೆ ಪೌರಕಾರ್ಮಿಕ ಮಹಿಳೆ ಮೃತ್ಯು
ವಿಶ್ವನಾಥ ನಾಗೇನಹಳ್ಳಿ ವಾರ್ಡ್ ನ ಪೌರಕಾರ್ಮಿಕ ಮಹಿಳೆ(28) ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ಸೋಂಕಿನ ಲಕ್ಷಣಗಳಿದ್ದರೂ ಚಿಕಿತ್ಸೆಗೆ ಹೋಗಲು ರಜೆ ಕೊಡದೆ ಕೆಲಸ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ, ಮಹಿಳೆಗೆ ಬುಧವಾರ ಕೊರೋನ ವರದಿ ಪಾಸಿಟಿವ್ ಬಂದಿದೆ. ಈ ವೇಳೆ ನಗರದ ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆ ಕೇಳಿದಾಗ ಲಭ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಕೊನೆಗೆ ನಗರದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ. ಆದರೆ, ಅಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲದ ಕಾರಣ ಗುರುವಾರ ಬೆಳಗ್ಗೆ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇಬ್ಬರು ಪಾಲಿಕೆ ಕಾರ್ಮಿಕರು ಮೃತ
ದೀಪಾಂಜಲಿ ನಗರದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಚಾಲಕ ಹಾಗೂ ಕೆ.ಆರ್ ಮಾರ್ಕೆಟ್ ಸಿಜಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಆಯುಕ್ತರ ಆಪ್ತ ಸಹಾಯಕನಿಗೆ ಕೊರೋನ
ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರ ಆಪ್ತ ಸಹಾಯಕ ಅವರಿಗೆ ಕೂಡ ಕೊರೋನ ಸೋಂಕು ದೃಢಪಟ್ಟಿದೆ. ಅರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್ ಸುರಪುರ ಅವರ ವಾಹನ ಚಾಲಕನಿಗೂ ಸೋಂಕು ದೃಢಪಟ್ಟಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಚೇರಿಯನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ.

ಚಿಕಿತ್ಸೆ ಸಿಗದೆ ಇಬ್ಬರ ಸಾವು

ರಾಜಾಜಿನಗರದ ಮಂಜುನಾಥ ನಗರ ನಿವಾಸಿ (51) ತೀವ್ರ ಉಸಿರಾಟ ತೊಂದರೆಯಿಂದ ಕಳೆದ ನಾಲ್ಕು ದಿನಗಳಿಂದ 10ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಎಲ್ಲೂ ಕೋಡಾ ಚಿಕಿತ್ಸೆ ಸಿಗಲಿಲ್ಲ ಎನ್ನಲಾಗಿದೆ. ಉಸಿರಾಟ ತೊಂದರೆ ಉಲ್ಬಣಗೊಂಡು ಗುರುವಾರ ಬೆಳಗಿನ ಜಾವ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News