ಲಾಕ್‌ಡೌನ್ ಒಂದೇ ಪರಿಹಾರವಲ್ಲ!

Update: 2020-07-17 05:00 GMT

ರಾಜ್ಯಾದ್ಯಂತ ಮತ್ತೆ ಭಾಗಶಃ ಲಾಕ್‌ಡೌನ್ ಘೋಷಿಸಲಾಗಿದೆ. ಸುಮಾರು 5 ಜಿಲ್ಲೆಗಳಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಗಾಳಿಯಲ್ಲಿ ಕತ್ತಿ ವರಸೆ ನಡೆಸುವ ಸ್ಥಿತಿಗೆ ಬಂದು ನಿಂತಿದ್ದಾರೆ ಶ್ರೀಸಾಮಾನ್ಯರು. ಕಣ್ಣಿಗೆ ಕಾಣದ ಶತ್ರುವಿನ ಜೊತೆಗೆ ಅವರು ಹೋರಾಡುತ್ತಿದ್ದಾರೆ. ಇಂದಿಗೂ ಕೊರೋನವನ್ನು ಜನಸಾಮಾನ್ಯರು ಒಂದು ರೋಗವಾಗಿ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಂಡಿಲ್ಲ. ಕೊರೋನ ಸೋಂಕಿನ ಕುರಿತಂತೆ ಹರಡಿರುವ ಅನಗತ್ಯ ಭಯ, ಗೊಂದಲಗಳೂ ಇದಕ್ಕೆ ಕಾರಣವಾಗಿರಬಹುದು. ವಿಪರ್ಯಾಸವೆಂದರೆ, ಪೊಲೀಸ್ ಇಲಾಖೆಗಳನ್ನು ಬಳಸಿಕೊಂಡು ಈ ರೋಗವನ್ನು ತಡೆಯಬಹುದು ಎಂದು ರಾಜಕಾರಣಿಗಳು ನಂಬಿದ್ದು. ಲಾಕ್‌ಡೌನ್, ಕರ್ಫ್ಯೂ ಹೆಸರಿನಲ್ಲಿ ದೇಶಾದ್ಯಂತ ಪೊಲೀಸರ ಕೈಗೆ ಲಾಠಿಗಳನ್ನು ಕೊಟ್ಟು ಜನಸಾಮಾನ್ಯರ ಮೇಲೆ ನಡೆಸಿದ ದಾಳಿ, ಈ ದೇಶದಲ್ಲಿ ಕೊರೋನವನ್ನು ಇನ್ನಷ್ಟು ಭೀಕರವಾಗಿಸಿತೇ ಹೊರತು, ಅದನ್ನು ತಡೆಯಲು ವಿಫಲವಾಯಿತು. ಅಷ್ಟೇ ಅಲ್ಲ, ಸೋಂಕಿತರು ಮತ್ತು ಸೋಂಕಿತರ ಕುಟುಂಬವನ್ನು ಪೊಲೀಸರು ನಡೆಸಿಕೊಂಡ ರೀತಿ, ಕೊರೋನ ಎನ್ನುವುದು ‘ಎಚ್‌ಐವಿ’ಗಿಂತಲೂ ಭೀಕರ ಎಂದು ಜನರು ಭಾವಿಸುವಂತಾಯಿತು.

ಕೊರೋನ ವೈರಸ್‌ಗೆ ಅಂಜುವುದಕ್ಕಿಂತಲೂ, ‘ಕ್ವಾರಂಟೈನ್’ ಹೆಸರಿನಲ್ಲಿ ಜನರನ್ನು ಅನಗತ್ಯ ಶೋಷಿಸುವ, ಗಾಬರಿ ಬೀಳಿಸುವ, ಜನರಿಂದ ಹಣ ಸುಲಿಯುವ ವೈದ್ಯಕೀಯ ಸಿಬ್ಬಂದಿಗೆ ಜನಸಾಮಾನ್ಯರು ಅಂಜುವ ಸ್ಥಿತಿ ನಿರ್ಮಾಣವಾಯಿತು. ಮನೆಯಲ್ಲಿ ಒಂದು ವಾರ ಕ್ವಾರಂಟೈನ್ ಅನುಭವಿಸಿದರೆ ಇಲ್ಲವಾಗಿಬಿಡಬಹುದಾದ ಈ ಸೋಂಕನ್ನು ಅನಗತ್ಯ ವೈಭವೀಕರಿಸಿ, ಸೋಂಕಿತರಲ್ಲದವರನ್ನೂ ಸಾರ್ವಜನಿಕ ಕ್ವಾರಂಟೈನ್‌ಗೆ ಒಳಪಡಿಸುವುದು ವ್ಯಾಪಕವಾಗಿ ನಡೆದು ಇಂದು ಜನರು ತಮ್ಮಲ್ಲಿ ರೋಗ ಲಕ್ಷಣ ಇದ್ದರೂ ಅದನ್ನು ವೈದ್ಯರಲ್ಲಿ ತೋಡಿಕೊಳ್ಳಲು ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ. ಬಡವರಂತೂ, ಮಲೇರಿಯಾ, ಡೆಂಗಿನಂತಹ ಕಾಯಿಲೆಗೆ ಈಡಾದರೂ ಅದಕ್ಕೆ ಬೇಕಾದ ಔಷಧಿಯನ್ನು ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಕೊರೋನ ಸೋಂಕಿತರು ನಿಜಕ್ಕೂ ಆ ಸೋಂಕಿಗೆ ಬಲಿಯಾಗಿದ್ದಾರೋ ಅಥವಾ ಇನ್ನಿತರ ಕಾಯಿಲೆಗಳಿಗೆ ಸೂಕ್ತ ಸಂದರ್ಭದಲ್ಲಿ ಔಷಧಿ ಸಿಗದೆ ಮೃತಪಟ್ಟಿದ್ದಾರೋ ಎನ್ನುವ ಗೊಂದಲ ಜನರಲ್ಲಿದೆ. ಒಂದೆಡೆ, ಕೆಲವು ನಿರ್ದಿಷ್ಟ ವೈದ್ಯರು ‘ಕೊರೋನ ಸೋಂಕಿತರು ಹೆದರುವ ಅಗತ್ಯವಿಲ್ಲ’ ಎಂದು ಜೋರು ದನಿಯಲ್ಲಿ ಹೇಳುತ್ತಿದ್ದಾರೆ. ಮಗದೊಂದೆಡೆ, ಯಾವುದೋ ಕಾಯಿಲೆಗೆ ಔಷಧಿಗೆಂದು ಹೋದವರನ್ನು ಹಿಡಿದು ಆಸ್ಪತ್ರೆಗಳು ‘ಕೊರೋನ’ ಹೆಸರಲ್ಲಿ ಬಂಧಿಸಿಡುವ ಕೆಲಸವನ್ನು ಮಾಡುತ್ತಿವೆೆ. ‘ತಮಗೆ ಯಾವುದೇ ರೋಗ ಲಕ್ಷಣವಿಲ್ಲ, ನಮ್ಮನ್ನು ಮನೆಯಲ್ಲೇ ಕ್ವಾರಂಟೈನ್ ಅನುಭವಿಸಲು ಬಿಡಿ’ ಎಂದವರನ್ನೂ ಬಲವಂತವಾಗಿ ಆಸ್ಪತ್ರೆಯ ದಿಗ್ಬಂಧನದಲ್ಲಿಡುವುಡು, ಅದಕ್ಕೊಪ್ಪದಿದ್ದರೆ ಕಾನೂನಿನ ಮೂಲಕ ಬೆದರಿಸುವುದು ಇವೆಲ್ಲವೂ ಕೊರೋನ ವೈರಸ್ ನಮ್ಮ ನಡುವೆ ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿವೆ. ಇದೀಗ ಗಾಯದ ಮೇಲೆ ಬರೆ ಎಳೆಯುವಂತೆ ಮತ್ತೊಮ್ಮೆ ಸರಕಾರ ಲಾಕ್‌ಡೌನ್‌ನ ಮೊರೆ ಹೋಗಿದೆ.

ವೈದ್ಯಕೀಯ ಮಾರ್ಗಗಳ ಮೂಲಕ ಕೊರೋನ ಸಾಂಕ್ರಾಮಿಕವಾಗಿ ಹರಡದಂತೆ ನೋಡಿಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಲಾಕ್‌ಡೌನ್‌ನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ರಾಜ್ಯದಲ್ಲಿ ನಮ್ಮ ನಾಯಕರು, ಲಾಕ್‌ಡೌನ್‌ನ್ನೇ ಕೊರೋನ ವೈರಸ್ ತಡೆಯುವುದಕ್ಕಿರುವ ಏಕೈಕ ದಾರಿ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಲಾಕ್‌ಡೌನ್ ಸಡಿಲಿಕೆಯ ಸಂದರ್ಭದಲ್ಲಿ ನೂಕು ನುಗ್ಗಲು ನಡೆಸುತ್ತಾ, ಉಳಿದ ಸಮಯ ಮನೆಯಲ್ಲಿ ಬೀಗ ಜಡಿದು ಕುಳಿತರೆ ಅದರಿಂದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಾಧ್ಯವಿಲ್ಲ. ಇದರ ಬದಲು, ಜನರಲ್ಲಿ ಕೊರೋನದ ಕುರಿತಂತೆ ಸ್ವಯಂ ಜಾಗೃತಿಯನ್ನು ಬಿತ್ತುವುದೇ ಸರಿಯಾದ ಮಾರ್ಗ ಎಂದು ಹಲವು ವೈದ್ಯರು, ತಜ್ಞರು ತಿಳಿ ಹೇಳಿದ್ದ್ದರಾದರೂ, ಸರಕಾರ ಇದನ್ನು ಕಿವಿಗೆ ಹಾಕಿಕೊಳ್ಳುವುದಕ್ಕೆ ಸಿದ್ಧವಿದ್ದಂತಿಲ್ಲ. ಜನರ ಆತಂಕ, ಭಯ ಎಲ್ಲಿ ಸರಕಾರದ ವಿರುದ್ಧ ಆಕ್ರೋಶವಾಗಿ ಮಾರ್ಪಾಡಾಗುತ್ತದೆಯೋ ಎಂದು ಸರಕಾರ ಜನರನ್ನು ಸಂತೃಪ್ತಿ ಪಡಿಸುವುದಕ್ಕಾಗಿಯೇ ಲಾಕ್‌ಡೌನ್ ಘೋಷಿಸಿದೆ. ‘ಲಾಕ್‌ಡೌನ್‌ನಿಂದಲೇ ಕೊರೋನವನ್ನು ಎದುರಿಸಲು ಸಾಧ್ಯ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಿಳಿಸಿದ್ದಾರೆ. ಆದರೂ ವ್ಯಾಪಕ ಒತ್ತಡಗಳು ಬಂದುದರಿಂದ ಅವರು ಲಾಕ್‌ಡೌನ್‌ನ್ನು ರಾಜ್ಯದ ಮೇಲೆ ಹೇರಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು.

ಇವೆಲ್ಲದರ ಬೆನ್ನಿಗೇ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ‘‘ಕೊರೋನ ವ್ಯಾಪಕವಾಗಲಿದೆ. ದೇವರೇ ಇದರಿಂದ ನಮ್ಮನ್ನು ಕಾಪಾಡಬೇಕು’’ ಎಂದು ಸಾರ್ವಜನಿಕವಾಗಿ ಮಾತನಾಡುತ್ತಾ ಶ್ರೀರಾಮುಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳದೆಯೇ ಸಾರ್ವಜನಿಕ ಸಮಾರಂಭವನ್ನು ಹಮ್ಮಿಕೊಂಡ ಕುಖ್ಯಾತಿಯನ್ನು ಹೊಂದಿರುವ ಶ್ರೀರಾಮುಲು, ಇದೀಗ ಕೊರೋನ ಸಮಸ್ಯೆಯನ್ನು ಸಂಪೂರ್ಣವಾಗಿ ದೇವರಿಗೆ ಒಪ್ಪಿಸಿ ‘ಸರಕಾರದ ಕೆಲಸ ದೇವರ ಕೆಲಸ’ ಎನ್ನುವ ಮಾತಿಗೆ ಅರ್ಥ ತುಂಬಲು ಹೊರಟಿದ್ದಾರೆ. ಹಾಗೆ ನೋಡಿದರೆ, ಕೊರೋನ ಎಂದಲ್ಲ ಎಲ್ಲವನ್ನೂ ದೇವರೇ ಕಾಪಾಡುತ್ತಿರುವುದು. ಅದರ ಬಗ್ಗೆ ಜನರಿಗೆ ಯಾವ ಅನುಮಾನವೂ ಇಲ್ಲ. ಆದರೆ ಸರಕಾರ ತನ್ನ ಹೊಣೆಗಾರಿಕೆಗಳನ್ನು ಎಷ್ಟರಮಟ್ಟಿಗೆ ನಿರ್ವಹಿಸಿದೆ? ಕೊರೋನದ ಕುರಿತಂತೆ ಸರ್ವ ಆತಂಕ, ಗೊಂದಲಗಳನ್ನು ಬಿತ್ತಿ, ಬಳಿಕ ‘ದೇವರೇ ನಮ್ಮನ್ನು ಕಾಪಾಡಬೇಕು’ ಎನ್ನುವುದನ್ನು ಘೋಷಿಸುವುದಕ್ಕಾಗಿ ಒಬ್ಬ ಆರೋಗ್ಯ ಸಚಿವರ ಅಗತ್ಯ ಈ ನಾಡಿಗಿದೆಯೇ? ಭವಿಷ್ಯದಲ್ಲಿ ಕೊರೋನ ಇನ್ನಷ್ಟು ವ್ಯಾಪಕವಾಗಿ ಹರಡಲಿದೆ ಎನ್ನುವುದನ್ನು ಸ್ವತಃ ಆರೋಗ್ಯ ಸಚಿವರೇ ಹೇಳುತ್ತಾರೆ. ಹೀಗಿರುವಾಗ, ಈ ಲಾಕ್‌ಡೌನ್‌ನ ಉದ್ದೇಶವಾದರೂ ಏನು? ಸಚಿವರಿಗೂ ಈ ಲಾಕ್‌ಡೌನ್ ಮೇಲೆ ಯಾವುದೇ ಭರವಸೆಯಿಲ್ಲ ಎಂದಾಯಿತಲ್ಲವೇ? ಲಾಕ್‌ಡೌನ್ ಕೊರೋನ ಮಾತ್ರವಲ್ಲ, ಇನ್ನಿತರ ರೋಗ ರುಜಿನಗಳನ್ನು ಭೀಕರವಾಗಿಸುತ್ತಿದೆ.

ಮುಖ್ಯವಾಗಿ ಲಾಕ್‌ಡೌನ್‌ನಿಂದಾಗಿ ನಮ್ಮ ನಡುವೆ ಹಸಿವು ಕಾಯಿಲೆಯ ರೂಪ ಪಡೆಯುತ್ತಿದೆ. ಜೊತೆಗೆ ಇನ್ನಿತರ ರೋಗಗಳಿಗೂ ಔಷಧಿ ಒದಗಿಸಲು ಲಾಕ್‌ಡೌನ್ ಬಹುದೊಡ್ಡ ತಡೆಯಾಗಿದೆ. ಪರಿಣಾಮವಾಗಿ, ನದಿಗಳೆಲ್ಲ ಕಡಲು ಸೇರಿ ತಾವೇ ಕಡಲಾಗುವಂತೆ, ವಿವಿಧ ರೋಗಗಳೆಲ್ಲ ಅಂತಿಮವಾಗಿ ಕೊರೋನದಲ್ಲಿ ವಿಲೀನವಾಗುವ ಲಕ್ಷಣಗಳು ಕಾಣುತ್ತಿವೆ. ಶ್ರೀರಾಮುಲು ಅವರ ಹೇಳಿಕೆ, ಕೊರೋನ ಸರಕಾರದ ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಕೊರೋನದ ವಿರುದ್ಧ ಬಳಸುವ ಆಯುಧಗಳೆಲ್ಲವೂ ಜನಸಾಮಾನ್ಯರ ಬದುಕನ್ನು ಗಾಯಗೊಳಿಸುತಿವೆೆ. ಸರಕಾರ, ಕನಿಷ್ಠ ಕೊರೋನಕ್ಕೆ ಔಷಧಿ ಒದಗಿಸದಿದ್ದರೂ ಪರವಾಗಿಲ್ಲ, ಇನ್ನಿತರ ರೋಗಗಳಿಗೆಂದು ಆಸ್ಪತ್ರೆಗಳಿಗೆ ಕಾಲಿಡುವ ಜನಸಾಮಾನ್ಯರನ್ನು ‘ಕೊರೋನ ಪಾಸಿಟಿವ್’ ಹೆಸರಿನಲ್ಲಿ ಶೋಷಣೆ ನಡೆಸುವುದನ್ನು ನಿಲ್ಲಿಸಬೇಕು. ಕೊರೋನ ಸೋಂಕಿತರೆಂದು ಗುರುತಿಸಲ್ಪಟ್ಟರೂ, ಸಂಪೂರ್ಣ ಆರೋಗ್ಯವಂತರಾಗಿರುವ ಜನರನ್ನು ಕ್ವಾರಂಟೈನ್ ಹೆಸರಿನಲ್ಲಿ ಶೋಷಿಸದೆ, ಅವರವರ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಲು ಅವರಿಗೆ ಅನುಮತಿ ನೀಡಬೇಕು. ಹಾಗೆಯೇ ಅನಗತ್ಯವಾಗಿ ಎಲ್ಲರನ್ನೂ ಪಾಸಿಟಿವ್ ಪರೀಕ್ಷೆಯ ದಂಧೆಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾಗಿದೆ. ಕೊರೋನ ಅಪಾಯಕಾರಿ ರೋಗವಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಲಕ್ಷಾಂತರ ಜನರು ಈಗಾಗಲೇ ಈ ಸೋಂಕಿನಿಂದ ಬರೇ ಒಂದು ವಾರದಲ್ಲಿ ಗುಣಮುಖವಾಗಿದ್ದಾರೆ. ಉಳಿದ ಲಕ್ಷಾಂತರ ಜನರಲ್ಲಿ ರೋಗಲಕ್ಷಣಗಳೇ ಕಂಡು ಬಂದಿಲ್ಲ. ಅಂತಹ ರೋಗಲಕ್ಷಣಗಳಿರುವವರು ಮನೆಯಲ್ಲೇ ಸ್ವಯಂನಿಯಂತ್ರಣಕ್ಕೊಳಗಾದರೆ ಉಳಿದವರಿಗೆ ಯಾವ ಅಪಾಯವೂ ಇಲ್ಲ. ವೃದ್ಧರು, ಇನ್ನಿತರ ಗಂಭೀರ ಕಾಯಿಲೆಗಳಿರುವವರನ್ನು ಜೋಪಾನ ಮಾಡುವುದು ಆಯಾ ಕುಟುಂಬದ ಹೊಣೆಗಾರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಸಡಿಲಿಕೆಗೊಳಿಸಿ ಆರ್ಥಿಕತೆಯನ್ನು ಮತ್ತೆ ಚಿಗುರಿಸುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಜನರು ಆರೋಗ್ಯ, ಶಿಕ್ಷಣ, ಆಹಾರಗಳಿಗಾಗಿ ವ್ಯಯ ಮಾಡಲು ಕೈಯಲ್ಲಿ ಕಾಸಿಲ್ಲದೆ ಕಂಗಾಲಾಗಿದ್ದಾರೆ. ಈ ಚಿಂತೆಯೇ ಅವರ ಪಾಲಿನ ಅತಿ ದೊಡ್ಡ ಕಾಯಿಲೆಯಾಗಿದೆ. ಮೊತ್ತ ಮೊದಲು ಈ ಕಾಯಿಲೆಗೆ ಔಷಧಿ ಹುಡುಕುವ ಕೆಲಸವನ್ನು ಸರಕಾರ ಮಾಡಬೇಕು. ಭಾರತದಲ್ಲಿ ಹಸಿವಿಗಿಂತ ಮಾರಕ ಕಾಯಿಲೆ ಇನ್ನೊಂದಿಲ್ಲ. ಕೊರೋನದ ಹೆಸರಿನಲ್ಲಿ ಆ ಕಾಯಿಲೆಯನ್ನು ಇನ್ನಷ್ಟು ಭೀಕರವಾಗಿಸಲಾಗಿದೆ. ಹಸಿವು ಭವಿಷ್ಯದಲ್ಲಿ ಇನ್ನಷ್ಟು ಹೊಸ ರೋಗಗಳನ್ನು ಹುಟ್ಟಿಸಿ ಹಾಕಿದರೆ ಅಚ್ಚರಿಯಿಲ್ಲ. ಅದಕ್ಕೆ ಮೊದಲು ಹಸಿವಿಗೆ ಔಷಧಿ ಹುಡುಕುವ ಕೆಲಸ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News